ಜಿಲ್ಲೆಯಲ್ಲಿ ಅಪಘಾತದಲ್ಲಿ ವಾರ್ಷಿಕ 250ಕ್ಕೂ ಅಧಿಕ ಸಾವು

udp-19-masacharane
Published on

ಉಡುಪಿ: ಜಿಲ್ಲೆಯಲ್ಲಿ ಅಪಘಾತಗಳಿಂದಾಗಿ ವರ್ಷಕ್ಕೆ ಸುಮಾರು 250ಕ್ಕೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದು, ಇದರಿಂದ 250 ಕುಟುಂಬಗಳು ತೊಂದರೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಅರುಣ್​ ಕೆ. ಹೇಳಿದರು.

ಗುರುವಾರ ನಾರಾಯಣ ಗುರು ಸಭಾಭವನದಲ್ಲಿ ಜಿಲ್ಲಾ ಪೊಲೀಸ್​, ಪೊಲೀಸ್​ ಉಪ ವಿಭಾಗ ವತಿಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರೂ ಪೊಲೀಸರೊಂದಿಗೆ ಸಹಕರಿಸಬೇಕು. ಬೆಳೆ ಬಾಳುವ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳಬಾರದು. ತಮ್ಮ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಬಾರದು. ಸೈಬರ್​ ವಂಚನೆ ಬಗ್ಗೆ ಜಾಗೃತರಾಗಬೇಕು. ಬ್ಯಾಂಕ್​ ಖಾತೆಯಿಂದ ಹಣ ಕಡಿತವಾದರೆ ತಕ್ಷಣ 1930 ಸಂಖ್ಯೆಗೆ ಕರೆ ಮಾಡಬೇಕು. ಇದರಿಂದ ಖಾತೆಯನ್ನು ಸ್ತಂಭನಗೊಳಿಸಲಾಗುವುದು. ಹಣವೂ ಸುರತವಾಗಿರುತ್ತದೆ ಎಂದರು.

ಮಣಿಪಾಲ ಠಾಣೆ ಪೊಲೀಸ್​ ನಿರೀಕ್ಷಕ ದೇವರಾಜ್​ ಟಿ.ವಿ. ಮಾತನಾಡಿ, ಭಾರತದಲ್ಲಿ 239 ಬಗೆಯ ಮಾದಕ ದ್ರವ್ಯಗಳನ್ನು ನಿಷೇಧಿಸಲಾಗಿದ್ದು, ಇತ್ತೀಚೆಗೆ ಚಾಕಲೇಟ್​ ಮೂಲಕ ಡ್ರಗ್​ ಹಂಚುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು. ಮಾದಕ ದ್ರವ್ಯ ಹಾವಳಿ ನಿಯಂತ್ರಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಸೈಬರ್​ ಠಾಣೆ ಎಸ್​ಐ ರಾಮಚಂದ್ರ ನಾಯಕ್​ ಸೈಬರ್​ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಪರಮೇಶ್ವರ್​ ಹೆಗಡೆ, ಹಾಸ್ಯ ನಟ ಅರವಿಂದ ಬೋಳಾರ್​, ಪತ್ರಕರ್ತ ವಾಲ್ಟರ್​ ನಂದಳಿಕೆ, ಮಧುವೇಹ ತಜ್ಞೆ ಡಾ. ಶ್ರುತಿ ಬಲ್ಲಾಳ್​, ಮಿಸ್​ ಟಾಪ್​ ಮಾಡೆಲ್​ ಇಂಡಿಯಾ ವಿಜೇತೆ ಸ್ಫೂರ್ತಿ ಶೆಟ್ಟಿ, ಜಿಲ್ಲಾ ಪೊಲೀಸ್​ ಉಪಾಧೀಕ್ಷಕ ಪ್ರಭು ಡಿ.ಟಿ. ಉಪಸ್ಥಿತರಿದ್ದರು. ಬ್ರಹ್ಮಾವರ ಪೊಲೀಸ್​ ವೃತ್ತ ನಿರೀಕ್ಷಕ ದಿವಾಕರ್​ ಸ್ವಾಗತಿಸಿದರು. ಅನಿತಾ ಚೇತನ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net