ಸಂಸದೆ ಪ್ರಿಯಾ ಸರೋಜ್ ಜೊತೆಗಿನ ತಮ್ಮ ಪ್ರೇಮಕಥೆ ಹಂಚಿಕೊಂಡ ಕ್ರಿಕೆಟರ್ ರಿಂಕು ಸಿಂಗ್| Rinku Singh-Priya Saroj

Rinku Singh
Published on

Rinku Singh-Priya Saroj: ಭಾರತದ ಖ್ಯಾತ ಕ್ರಿಕೆಟರ್ ಮತ್ತು ಐಪಿಎಲ್​ನಲ್ಲಿ ಕೆಕೆಆರ್ ಪರ ಆಡುವ ರಿಂಕು ಸಿಂಗ್​ ಜೂನ್ 8ರಂದು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಸದ್ಯ ರಿಂಕು ಸಿಂಗ್ ಪ್ರಿಯಾ ಜೊತೆಗಿನ ತಮ್ಮ ಪ್ರೇಮಕಥೆ, ಮೊದಲ ಪರಿಚಯವನ್ನು ಹಂಚಿಕೊಂಡಿದ್ದಾರೆ.

ನ್ಯೂಸ್​ 24 ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ರಿಂಕು, "ನಮ್ಮ ಪ್ರೇಮಕಥೆ 2022ರ ಕೋವಿಡ್​ ವರ್ಷದಲ್ಲಿ ಐಪಿಎಲ್​ ಆಡಲು ಮುಂಬೈನಲ್ಲಿದ್ದಾಗ ಪ್ರಾರಂಭವಾಯಿತು. ನನ್ನ ಫ್ಯಾನ್ ಪೇಜ್​ವೊಂದು ಪ್ರಿಯಾಳ ಗ್ರಾಮದಲ್ಲಿ ಮತದಾನದ ಬಗ್ಗೆ ಒಂದು ಫೋಟೋ ಹಾಕಿತ್ತು. ಪ್ರಿಯಾಳ ತಂಗಿ ಫೋಟೋ ಮತ್ತು ವಿಡಿಯೋಗಳನ್ನು ತೆಗೆಯುತ್ತಾಳೆ. ಅವಳು ಫೋಟೋ ಹಾಕಲು ಫ್ಯಾನ್ ಪೇಜ್ ಸಹಾಯ ಕೇಳಿರಬಹುದು ಎಂದು ಭಾವಿಸುತ್ತೇನೆ. ನಾನು ಆ ಫೋಟೋ ನೋಡಿದ ಬಳಿಕ ಇಷ್ಟಪಟ್ಟೆ, ಅವಳು ನನಗೆ ಸರಿಯಾಗಿ ಹೊಂದಿಕೊಳ್ಳುತ್ತಾಳೆ ಎಂದು ಭಾವಿಸಿದೆ.

ಮೆಸೇಜ್ ಮಾಡೋಣ ಅಂತ ಯೋಚಿಸಿದೆ, ನಂತರ ಸರಿಯಲ್ಲ ಎಂದು ಮಾಡಲಿಲ್ಲ. ಅವಳು ನನ್ನ ಕೆಲವು ಫೋಟೋಗಳನ್ನು ಲೈಕ್ ಮಾಡಿದಳು. ಬಳಿಕ ನಾನು ಅವಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದೆ, ಅಲ್ಲಿಂದ ಎಲ್ಲವೂ ಶುರುವಾಯಿತು. ನಂತರ ನಾವು ಮಾತನಾಡಲು ಆರಂಭಿಸಿದೆವು. ಒಂದೆರಡು ವಾರಗಳಲ್ಲಿ, ನಾವು ನಿಯಮಿತವಾಗಿ ಮಾತನಾಡುತ್ತಿದ್ದೆವು, ಪಂದ್ಯಗಳ ಮೊದಲು ಮಾತನಾಡುತ್ತಿದ್ದೆವು. ಆದ್ದರಿಂದ, 2022 ರಿಂದಲೇ ನಾನು ಪ್ರೀತಿಯಲ್ಲಿ ಬಿದ್ದೆ ಎಂದು ರಿಂಕು ತಮ್ಮ ಪ್ರೇಮಕಥೆಯನ್ನು ಹಂಚಿಕೊಂಡಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಚಲಿಶಹರ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಪ್ರಿಯಾ ಸ್ಪರ್ಧಿಸಿ ಗೆದ್ದಿದ್ದಾರೆ. ಸಂಸದೆಯಾದ ನಂತರ ಇಬ್ಬರ ನಡುವೆ ಯಾವುದೇ ಬದಲಾವಣೆಯಾಗಿಲ್ಲ. ಆದರೂ ಈಗ ದಿನಗಳಲ್ಲಿ ಅವರು ಪರಸ್ಪರ ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

"ಯಾವುದೇ ಬದಲಾವಣೆಯಾಗಿಲ್ಲ, ಆರಂಭದಲ್ಲಿ ನಾವು ಬಹಳ ಮಾತನಾಡುತ್ತಿದ್ದೆವು. ಆದರೆ ಈಗ ಅದು ಗಣನೀಯವಾಗಿ ಕಡಿಮೆಯಾಗಿದೆ. ಅವಳು ತನ್ನ ಕೆಲಸವನ್ನು ಮಾಡುತ್ತಿದ್ದಾಳೆ. ಗ್ರಾಮಗಳಿಗೆ ಹೋಗುತ್ತಾಳೆ, ಜನರೊಂದಿಗೆ ಮಾತನಾಡುತ್ತಾಳೆ, ಅವರಿಗೆ ಸಹಾಯ ಮಾಡುತ್ತಾಳೆ. ಜೊತೆಗೆ ಸಂಸತ್​ಗೆ ಹೋಗಬೇಕು. ರಾಜಕಾರಣಿಯಾಗಿ ಈ ಎಲ್ಲಾ ಕೆಲಸಗಳನ್ನು ಮಾಡುವುದು ಅವಳಿಗೆ ಮುಖ್ಯ. ಅವಳ ಇನ್‌ಸ್ಟಾಗ್ರಾಮ್‌ಗೆ ಹೋದರೆ, ಅವಳು ಎಷ್ಟು ಕೆಲಸ ಮಾಡುತ್ತಾಳೆ ಎಂಬುದನ್ನು ನೀವು ನೋಡಬಹುದು. ಅವಳು ಬೆಳಿಗ್ಗೆ ಹೋಗಿ, ರಾತ್ರಿ ವಾಪಸ್ ಬರುತ್ತಾಳೆ, ಆದ್ದರಿಂದ ನಮಗೆ ಮಾತನಾಡಲು ಹೆಚ್ಚು ಸಮಯ ಸಿಗುವುದಿಲ್ಲ, ಕೇವಲ ರಾತ್ರಿ ಸಮಯದಲ್ಲಿ ಮಾತ್ರ ಇಬ್ಬರು ಮಾತನಾಡುತ್ತೇವೆ" ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net