

ಬೆಂಗಳೂರು: ಸರ್ಕಾರ ಕಡ್ಡಾಯಗೊಳಿಸಿರುವ ಇ-ಖಾತಾ ಯೋಜನೆ ಅನುಷ್ಠಾನದಲ್ಲಿ ವಿವಿಧ ದೋಷಗಳು ಮುಂದುವರೆದಿದ್ದು, ಕೂಡಲೇ ಸಮಸ್ಯೆ ನಿವಾರಿಸುವಂತೆ ಕಾನ್‌ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಅಧ್ಯಕ್ಷ ಅಮರ್ ಮೈಸೂರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅಮರ್, ಸರ್ಕಾರ ಯಾವುದೇ ಹೊಸ ಯೋಜನೆಯನ್ನು ಘೋಷಿಸುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ನಿರ್ಣಯವಾಗಿರುತ್ತದೆ. ಆದರೆ ಹೊಸ ಯೋಜನೆಯ ಅನುಷ್ಟಾನಕ್ಕೆ ಆರಂಭದಲ್ಲಿ ತಾಂತ್ರಿಕ ದೋಷ, ಆಡಳಿತಾತ್ಮಕ ಸಮಸ್ಯೆಗಳು ತಲೆದೋರುವುದು ಸಹಜ. ಇಂತಹ ಪರಿಸ್ಥಿತಿಯಲ್ಲಿ ಹೊಸ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಳ್ಳುವ ಮೊದಲೇ ಯೋಜನೆಯನ್ನು ಕಡ್ಡಾಯಗೊಳಿಸಿದ್ದು ಸರಿಯಾದ ಕ್ರಮವಲ್ಲ. ಸದ್ಯ ಇ-ಖಾತಾ ಕಡ್ಡಾಯಗೊಳಿಸಿರುವುದರಿಂದ ಸರ್ಕಾರಕ್ಕೆ ಬರಬೇಕಾದ ಆದಾಯದಲ್ಲಿ ಶೇ.60ರಷ್ಟು ನಷ್ಟವಾಗಿದೆ. ಸರ್ಕಾರಕ್ಕೆ ಬರಬೇಕಾದ ಆದಾಯ ಮುಂದೆ ಬರಲಿದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆ ಮತ್ತು ವಹಿವಾಟಿನ ಮೇಲೆ ಆಗಿರುವ ದುಷ್ಪರಿಣಾಮ ದೊಡ್ಡ ನಷ್ಟವನ್ನು ಉಂಟು ಮಾಡಿದೆ. ರಿಯಲ್ ಎಸ್ಟೇಟ್ ಕ್ಷೇತ್ರ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಕುರಿತು ಈಗಾಗಲೇ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಮನವಿ ಪತ್ರ ಸಲ್ಲಿಸಿದ್ದು, ಆದಷ್ಟು ಶೀಘ್ರ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ. ಇ-ಖಾತ ಕಡ್ಡಾಯಗೊಳಿಸಿರುವುದರ ಸಮಸ್ಯೆ ವಿಶೇಷವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಿದ್ದು, ಬಿಬಿಎಂಪಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮತ್ತು ಮುದ್ರಾಂಕ ಆಯುಕ್ತ ದಯಾನಂದರನ್ನು ಕ್ರೆಡಾಯ್ ನಿಯೋಗ ಭೇಟಿ ಮಾಡಿ ವಿನಂತಿ ಸಲ್ಲಿಸಿದ್ದು, ಈವರೆಗೆ ಸಮಸ್ಯೆ ಪರಿಹಾರವಾಗಿಲ್ಲ. ಇದರಿಂದ ಡೆವಲಪರ್ಸ್‌ಗಳು ಸಮಸ್ಯೆ ಎದುರಿಸುತ್ತಿದ್ದಾರೆಂದು ಅಮರ್ ಮೈಸೂರು ವಿವರಿಸಿದರು.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಇ-ಖಾತಾ ಯೋಜನೆ ರೂಪಿಸಿದ್ದು, ಕಡ್ಡಾಯ ಅನುಷ್ಟಾನ ಜಾರಿಗೊಳಿಸಿರುವುದು ರಿಯಲ್ ಎಸ್ಟೇಟ್ ಕ್ಷೇತ್ರ ಭಾರಿ ಸವಾಲುಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಬೇಕೆಂದು ಕ್ರೆಡಾಯ್ ಸಲಹೆ ನೀಡಿದೆ. ಕಾವೇರಿ 2.0 ತಂತ್ರಾಂಶವು ಈ ಹಿಂದೆ ಇದ್ದ ಆಧಾರ ಓಟಿಪಿಯ ಜೊತೆಗೆ ಆಧಾರ್‌ನಲ್ಲಿರುವ ಹೆಸರಿನ ಹೊಂದಾಣಿಕೆ ಕೇಳುತ್ತಿದೆ. ಜೊತೆಗೆ ಹೊಸ ನಿಯಮದ ಪ್ರಕಾರ ಸ್ಟ್ಯಾಂಪ್ ಡ್ಯೂಟಿ ದರ ವಿಪರೀತವಾಗಿದ್ದು, ಇದನ್ನು ಕಡಿಮೆ ಮಾಡದಿದ್ದರೆ ಜನ ಆಸ್ತಿ ಖರೀದಿಗೆ ಮುಂದೆ ಬರುವುದಿಲ್ಲ. ಸರ್ಕಾರ ಸಾಧ್ಯವಾದಷ್ಟು ನಿಯಮಗಳನ್ನು ಸರಳೀಕರಣಗೊಳಿಸುವುದರಿಂದ ಹೆಚ್ಚೆಚ್ಚು ಜನ ಆಸ್ತಿ ಖರೀದಿಗೆ ಮುಂದಾಗುತ್ತಾರೆ. ಇದರಿಂದ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತದೆ. ರಿಯಲ್ ಎಸ್ಟೇಟ್ ಉದ್ಯಮವೂ ಚೇತರಿಸಿಕೊಳ್ಳಲಿದೆ. ಈ ಸಂಬಂಧ ಸರ್ಕಾರ ಮತ್ತು ಬಿಬಿಎಂಪಿಗೆ ಅಗತ್ಯ ಸಹಕಾರ-ಸಲಹೆ ನೀಡುವುದಕ್ಕೆ ಕ್ರೆಡಾಯ್ ಸದಾ ಸಿದ್ಧವಾಗಿದೆ ಎಂದು ತಿಳಿಸಿದೆ.
ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಆಸ್ತಿ ಖರೀದಿಯ ಪ್ರಮಾಣ ಹೆಚ್ಚಿರುತ್ತದೆ. ದಸರಾ, ದೀಪಾವಳಿಯಿಂದ ಆರಂಭವಾಗಿ ವರ್ಷಾಂತ್ಯದ ಕ್ರಿಸ್‌ಮಸ್ ರಜೆಗಾಗಿ ಬರುವ ಎನ್‌ಆರ್‌ಐಗಳು ಆಸ್ತಿ ಖರೀದಿ ಹೆಚ್ಚಾಗಿ ಆಸ್ತಿ ಖರೀದಿ ಮಾಡುತ್ತಾರೆ. ಆದರೆ ಇ-ಖಾತಾ ಗೊಂದಲದಿಂದಾಗಿ ಎನ್‌ಆರ್‌ಐಗಳು ಹಿಂದೇಟು ಹಾಕುತ್ತಿದ್ದಾರೆ. ಮಾರಾಟ ಮಾಡುವುದಕ್ಕೂ ಇದೇ ಸಮಸ್ಯೆ ಎದುರಾಗಿದೆ. ನಿಗದಿತ ಸಮಯದ ರಜೆಗೆ ಬಂದವರಿಗೆ ಟೆಕ್ನಿಕಲ್ ಸಮಸ್ಯೆಯಿಂದಾಗು ವಿಳಂಬ ಆಸ್ತಿ ಮಾರಾಟಕ್ಕೆ ತೊಡಕಾಗಿದೆ.