

ಬೈಂದೂರು: ಎಪ್ಪತ್ತರ ದಶಕದ ನಂತರದ ರಾಜಕೀಯ ವ್ಯವಸ್ಥೆ ಸಮಾಜದ ಜನರ ಮಾನಸಿಕ, ಬೌದ್ಧಿಕ ಹಾಗೂ ಸೃಜನಶೀಲತೆ ನಾಶಮಾಡಿವೆ ಎಂದು ಬೈಂದೂರು ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ ಹೇಳಿದರು.
ಶ್ರೀ ಶಾರದಾ ವೇದಿಕೆಯಲ್ಲಿ ಸೋಮವಾರ ಬೈಂದೂರು ರೋಟರಿ ಕ್ಲಬ್ ಸಹಯೋಗದಲ್ಲಿ ಸುರಭಿ ಕಲಾಸಂಸ್ಥೆ 25ನೇ ವರ್ಷದ ರಜತಯಾನದ ಅಂಗವಾಗಿ ತಿಂಗಳ ತಿರುಳು ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಟಕ ಸಹಿತ ಕಲಾ ಪ್ರದರ್ಶನಗಳಿಲ್ಲದ ದೇಶ ಸಾಂಸ್ಕೃತಿಕವಾಗಿ ಬರಡಾಗುತ್ತದೆ ಎನ್ನುವುದಕ್ಕೆ ಅವುಗಳನ್ನು ನಿಷೇಧಿಸಿದ ದೇಶಗಳಲ್ಲಿ ಉದಾಹರಣೆ ದೊರೆಯುತ್ತದೆ. ಮನುಷ್ಯ ಪ್ರವೃತ್ತಿ ಮತ್ತು ಸ್ವಭಾವಗಳನ್ನು ಪ್ರತಿನಿಧಿಸುವ ಪಾತ್ರಗಳಿಂದ ನಾಟಕಗಳು ಕೂಡಿರುವುದರಿಂದ ಅವುಗಳಿಗೆ ಜಾಗತಿಕ ಆಯಾಮ ಇದೆ. ರಂಗಭೂಮಿ ಚಟುವಟಿಕೆ ನಿರಂತರವಾಗಿರುವ ಪ್ರದೇಶದಲ್ಲಿ ಸ್ವಭಾವ ಮತ್ತು ಪ್ರವೃತ್ತಿಯ ಆತ್ಮಾವಲೋಕನ ನಡೆಯುವುದರಿಂದ ಅಲ್ಲಿ ಸಾಮರಸ್ಯ ಮನೆಮಾಡಿರುತ್ತದೆ ಎಂದರು.
ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಮೋಹನ ರೇವಣ್ಕರ್, ರೋಟರಿ ಕ್ಲಬ್ ಟ್ರಸ್ಟ್ ಕಾರ್ಯದರ್ಶಿ ಆರ್.ಸೋಮನಾಥನ್ ಉಪಸ್ಥಿತರಿದ್ದರು. ಸುರಭಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ವಂದಿಸಿದರು. ಸುರಭಿ ವ್ಯವಸ್ಥಾಪಕ ಸುಧಾಕರ ಪಿ. ನಿರೂಪಿಸಿದರು. ನಂತರ ರೋಟರಿ ಕ್ಲಬ್ ಸದಸ್ಯರಿಂದ ನಾದ-ನೃತ್ಯ-ನಾಟ್ಯ-ವೈವಿಧ್ಯ ಜರುಗಿತು.