ಪತ್ರಿಕಾ ಭಾಷೆಯಲ್ಲಿ ಸೃಜನಶೀಲತೆ, ಸಜ್ಜನಿಕೆ ಅವಶ್ಯ : ವಿಶ್ರಾಂತ ಸಹ ಕುಲಪತಿ ಪ್ರೊ. ಕೆ.ವಿ.ನಾಗರಾಜ್

1
Published on

ಮೈಸೂರು: ಪತ್ರಿಕಾ ಭಾಷೆಯಲ್ಲಿ ಸೃಜನಶೀಲತೆ, ಸಜ್ಜನಿಕೆ ಮತ್ತು ಕುಶಲತೆ ಇರಬೇಕು ಎಂದು ಅಸ್ಸಾಂ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಪ್ರೊ. ಕೆ.ವಿ.ನಾಗರಾಜ್ ಅಭಿಪ್ರಾಯಪಟ್ಟರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಆ್ಯಂಡ್ ರಿಸರ್ಚ್‌ನಿಂದ ಆಯೋಜಿಸಿರುವ ಪತ್ರಿಕಾ ಬರವಣಿಗೆ ಕೌಶಲ ಕುರಿತ ಎರಡು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು.

ಯಾವುದೇ ಭಾಷೆಯು ಸಮಾಜದ ವಿಕಸನದ ಉತ್ಪನ್ನವಾಗಿದೆ. ಭಾಷೆಗಳ ನಡುವೆ ಭಿನ್ನತೆಯಿದ್ದರೂ ಭಾರತದಲ್ಲಿ ಪ್ರತಿಯೊಂದು ಭಾಷೆಗೂ ತನ್ನದೇ ಆದ ವಿಶೇಷತೆ ಇದೆ ಎಂದು ವಿವರಿಸಿದರು.

ಉತ್ತಮ ಪತ್ರಕರ್ತರಾಗಲು ಬಯಸುವವರು ಒಂದಕ್ಕಿಂತ ಹೆಚ್ಚು ಭಾಷೆಯಲ್ಲಿ ಪರಿಣತಿ ಪಡೆಯುವುದು ಉತ್ತಮ. ಭಾಷೆಯಲ್ಲಿ ಚುಟುಕುತನ ಹಾಗೂ ಚುರುಕುತನ ಬಹಳ ಮುಖ್ಯ. ಸರಳ ಮತ್ತು ಜನಸಾಮಾನ್ಯರಿಗೆ ತಲುಪುವ ಭಾಷೆ ಬಳಕೆ ಪತ್ರಿಕಾ ಕ್ಷೇತ್ರಕ್ಕೆ ಅವಶ್ಯವಾಗಿದೆ. ಅಂತಹ ಸರಳ ಸಜ್ಜನಿಕೆಯ ಭಾಷೆಯನ್ನು ವಚನ ಸಾಹಿತ್ಯದಲ್ಲಿ ಕಾಣಬಹುದು ಎಂದು ಬಣ್ಣಿಸಿದರು.

ಪತ್ರಕರ್ತರಾದವರಿಗೆ ವ್ಯಾಕರಣ ಸ್ಪಷ್ಟತೆ ಬಹಳ ಮುಖ್ಯ. ಇದರೊಂದಿಗೆ ಕುಶಲತೆ ಇದ್ದರೆ ಚಂದ ಎಂದರು.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ. ಎನ್. ಮಮತಾ ಮಾತನಾಡಿ, ಸಾಹಿತ್ಯ ಓದುವ ಹವ್ಯಾಸವನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಸಾಹಿತ್ಯ ಓದುವಿಕೆ ನಶಿಸಿ ಹೋಗುತ್ತಿದೆ. ತಂತ್ರಜ್ಞಾನ ಭಾಷೆಯೊಂದಿಗೆ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದಬೇಕು. ಪ್ರತಿನಿತ್ಯ ಸಾಹಿತ್ಯ ಓದುವುದರಿಂದ ಭಾಷಾ ಜ್ಞಾನ ಬೆಳೆಯುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ. ವಿ.ಸಾಂಬಶಿವಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ದಿಕ್ಕು ತಪ್ಪಿಸುವಂತಹ ಸುಳ್ಳು ಸುದ್ದಿಗಳೇ ಹೆಚ್ಚಾಗುತ್ತಿವೆ. ಜವಾಬ್ದಾರಿಯುತ ಪತ್ರಿಕಾ ಬರವಣಿಗೆಗೆ ವಿಶ್ವಾಸಾರ್ಹತೆ ಬಹಳ ಮುಖ್ಯ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಉತ್ತಮ ಭಾಷಾ ಕೌಶಲ್ಯ ಪಡೆದುಕೊಳ್ಳುವಲ್ಲಿ ಈ ಕಾರ್ಯಾಗಾರ ಉಪಯುಕ್ತವಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ತ್ರಿವೇಣಿ, ಸಹಾಯಕ ಪ್ರಾಧ್ಯಾಪಕಿ ಡಾ. ಸುವಣಾ ಕಂಬಿ, ಸಂಪನ್ಮೂಲ ವ್ಯಕ್ತಿಗಳಾದ ಎಚ್.ಆರ್ ಶ್ರೀಶ, ಎಂ. ನಾಗರಾಜ, ಹೊನಕೆರೆ ನಂಜುಂಡೇಗೌಡ, ಡಾ. ಕೂಡ್ಲಿ ಗುರುರಾಜ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net