

ಮಡಿಕೇರಿ: ಯುವ ಜನತೆ ತಂಬಾಕು ಎನ್ನುವ ವ್ಯಸನಕ್ಕೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳದೆ ಉತ್ತಮ ಜೀವನ ನಿರ್ಮಾಣ ಮಾಡಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಬಿ.ಜಯಲಕ್ಷ್ಮಿ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಭಾಂಗಣದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಇಂದು ಯುವ ಜನತೆ ಹೆಚ್ಚಾಗಿ ತಂಬಾಕು ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ತಮ್ಮ ಅಮೂಲ್ಯವಾದ ಹಾಳು ಮಾಡಿಕೊಳ್ಳಬಾರದು. ವ್ಯಸನದಿಂದ ದೂರವಿದ್ದು, ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ವಿಶಾಲ್ ಮಾತನಾಡಿ, ತಂಬಾಕುವಿನ ಸೇವನೆಗೆ ಹೆಚ್ಚಾಗಿ ಯುವ ಜನತೆ ಮಾರುಹೋಗುತ್ತಿದ್ದಾರೆ. ಇದರಿಂದ ಅನೇಕ ಅಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ತಂಬಾಕನ್ನು ಮಕ್ಕಳಿಂದ ದೂರವಿರಿಸಿ ಮಕ್ಕಳನ್ನು ರಕ್ಷಿಸಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಮಾತನಾಡಿ, ತಂಬಾಕು ಸೇವನೆಯಿಂದ ಉಂಟಾಗುವ ತೊಂದರೆಗಳು, ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಮತ್ತು ಕೋಟ್ಪಾ ಕಾಯಿದೆ ೨೦೦೩ರ ಬಗ್ಗೆ ಸವಿವರವಾಗಿ ಅಂಕಿ ಅಂಶಗಳ ಸಹಿತ ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎಲ್.ಶ್ರೀನಿವಾಸ್ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯಿಂದ ಯುವ ಜನತೆ ದೂರ ಉಳಿದು, ಉತ್ತುಮ ಸಮಾಜ ನಿರ್ಮಿಸಿ ಎಂದು ತಿಳಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು ತಂಬಾಕಿನಿಂದಾಗುವ ತೊಂದರೆ ಬಗ್ಗೆ ಕಿರು ನಾಟಕ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ರೇವಣ್ಣ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಟಿ.ಎನ್.ಪಾಲಾಕ್ಷ, ಹಿರಿಯ ಆರೋಗ್ಯನಿರೀಕ್ಷಣಾಧಿಕಾರಿ ಶ್ರೀನಾಥ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕರು, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿಗಳು, ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.