ಸಮುದ್ರವನ್ನ ಸ್ವಚ್ಛ ಮಾಡತ್ತೆ, ತೆಂಗಿನ ಮರವೇರಿ ಕಾಯಿ ತಿನ್ನತ್ತೆ..! ಏಡಿ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು..

edi
Published on

ಮುಂದುವರಿದ ಭಾಗ...

ನೀರಿನಲ್ಲಿ ವಾಸಿಸುವ ಏಡಿಗಳು ಶೈವಲ, ಶಿಲೀಂಧ್ರ, ಬ್ಯಾಕ್ಟೀರಿಯಾ, ಕೀಟ, ಇತರ ಸಣ್ಣ ಸಣ್ಣ ಹುಳಗಳು, ಮುಂತಾದ ಜೀವಿಗಳನ್ನು ತಿನ್ನುವ ಮಿಶ್ರಾಹಾರಿಗಳು. ಕೆಲವು ಕೊಳೆತ ಮಾಂಸ ಮತ್ತು ಹೊಲಸನ್ನು ತಿಂದು ಸ್ವಚ್ಛ ಮಾಡುವ ಜಾಡಮಾಲಿಗಳು. ಇನ್ನು ಕೆಲವು ಮೊಸಳೆ ಮರಿ, ಆಮೆ ಮರಿಗಳನ್ನು ಬೇಟೆಯಾಡಿ ತಿನ್ನುವ ಮಾಂಸಾಹಾರಿಗಳು. ಒಂದು ಜಾತಿಯ ಏಡಿ ತೆಂಗಿನ ಮರವನ್ನು ಏರಿ ಎಳನೀರನ್ನು ನೆಲಕ್ಕೆ ಬೀಳಿಸಿ ಕೆಳಗೆ ಇಳಿದು ಬಂದು ಎಳೆ ತೆಂಗಿನಕಾಯಿಯನ್ನು ತಿನ್ನುತ್ತವೆ. ಅವುಗಳಿಗೆ ಕೋಕನಟ್ ಕ್ರ್ಯಾಬ್ ಎಂದೇ ಹೆಸರಿಡಲಾಗಿದೆ.

ಹತ್ತು ಹನ್ನೆರಡು ಅಡಿ ಅಗಲದ ದೈತ್ಯ ಏಡಿಗಳೂ ಇವೆ. ಇವುಗಳು ಜಪಾನ್ ಏಡಿಗಳು ಎಂದು ಹೆಸರು ಪಡೆದಿವೆ. ಇವು ಸಮುದ್ರದ ಅಡಿಯಲ್ಲಿ ಸತ್ತು ಬಿದ್ದಿರುವ ಜಲಚರಗಳ ದೇಹವನ್ನು ತಿಂದು ಸಮುದ್ರವನ್ನು ಸ್ವಚ್ಛಮಾಡುತ್ತವೆ. ಕೇವಲ ಐದು ಮಿ.ಮೀ. ಅಗಲದ ಚಿಕ್ಕ ಏಡಿಗಳೂ ಇವೆ. ಸಮುದ್ರದ ದಡದಲ್ಲಿ ಹಲವು ಜಾತಿಯ ಏಡಿಗಳು ಮರಳಿನಲ್ಲಿ ಗೂಡು ಮಾಡಿಕೊಂಡು ಅಲ್ಲಿರುವ ಸಣ್ಣ ಸಣ್ಣ ಹುಳುಗಳನ್ನು ತಿಂದು ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಿ ಸಮತೋಲನವನ್ನು ಕಾಪಾಡುತ್ತವೆ. ಎಲ್ಲ ಜಾತಿಯ ಏಡಿಗಳಿಗೆ ಈಜಲು ಗೊತ್ತಿಲ್ಲ. ನೆಲದ ಮೇಲೆ ವಾಸಿಸುವ ಏಡಿಗಳು ನೀರಿನಲ್ಲಿ ಜಾಸ್ತಿ ಸಮಯ ಇದ್ದರೆ ಸತ್ತುಹೋಗುತ್ತವೆ. ಆದರೆ, ನೀರಿನಲ್ಲಿ ವಾಸಿಸುವ ಏಡಿಗಳು ಹೊರಗೆ ಬಂದರೂ ಗಾಳಿಯಿಂದ ಆಮ್ಲಜನಕವನ್ನು ತೆಗೆದುಕೊಂಡು ಎರಡು ಮೂರು ದಿನಗಳವರೆಗೆ ಬದುಕುತ್ತವೆ. ಅವು ಗಾಳಿಯ ಮೂಲಕ ಉಸಿರಾಡುವ ಸಂದರ್ಭದಲ್ಲಿ, ಅವುಗಳ ಕಾಲಿನ ಬುಡದಲ್ಲಿ, ಗಾಳಿ ಮತ್ತು ತೇವಾಂಶದ ಪ್ರಭಾವದಿಂದ ಸಣ್ಣ ಸಣ್ಣ ಗುಳ್ಳೆಗಳು ಬರುತ್ತವೆ. ಕೆಲವು ಒಂದು ಹಂಗಾಮಿನಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮೊಟ್ಟೆಗಳನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಮರಿಗಳಾದ ನಂತರ ಹೊರಗೆ ಬಿಡುತ್ತವೆ. ಕೆಲವು ನೀರಿನಲ್ಲಿ ಬಿಡುತ್ತವೆ, ಇನ್ನೂ ಕೆಲವು ಅವುಗಳ ವಾಸಸ್ಥಾನದಲ್ಲಿಯೇ ಬಿಡುತ್ತವೆ. ಕೆಲವು ಜಾತಿಯವು ಮೊಟ್ಟೆ ಇಡಲು ನೀರಿಗೇ ಹೋಗಬೇಕು. ಸಮುದ್ರದ ಅಂಚಿನಲ್ಲಿರುವ ಕಲ್ಲುಬಂಡೆಗಳು, ಮ್ಯಾಂಗ್ರೋ ಮರಗಳು, ಕೆರೆ ನದಿಗಳ ಅಕ್ಕಪಕ್ಕದಲ್ಲಿರುವ ಹುಲ್ಲು ಗರಿಗಳು, ಗಿಡ ಮರಗಳು ಮತ್ತು ಇನ್ನಿತರ ಸಹಾಯವನ್ನು ಪಡೆದು ನೀರಿನಲ್ಲಿ ಮೊಟ್ಟೆ ಇಡುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net