

ವಯನಾಡ್: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 300ಕ್ಕೂ ಅಧಿಕ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಕೇರಳದ ವಯನಾಡು ಇದೀಗ ಭೀಕರ ಭೂಕುಸಿತದ ಬಳಿಕ ಸಾವಿನ ಮನೆಯಂತಾಗಿದೆ.
ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಈಗ 300ಕ್ಕೆ ಏರಿಕೆಯಾಗಿದ್ದು, ಇನ್ನೂ ಸುಮಾರು 200 ಜನ ನಾಪತ್ತೆಯಾಗಿದ್ದಾರೆ. ಮುಂಡಕೈ, ಚೂರಲ್ಮಲವನ್ನು ಹೇಳಹೆಸರಿಲ್ಲದಂತೆ ನಾಶ ಮಾಡಿದ ಭೂಕುಸಿತ ಸಂಭವಿಸಿ ನಾಲ್ಕನೇ ದಿನ ಕಳೆದರೂ, ಎಲ್ಲಿಯಾದರೂ ಜೀವ ಉಳಿದಿದೆಯೇ ಎಂದು ರಕ್ಷಣಾ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಇದರ ಬೆನ್ನಲ್ಲೇ, ಕೇರಳದಲ್ಲಿ ಭೂಕುಸಿತ ಉಂಟಾಗಲು ಗೋವುಗಳ ಹತ್ಯೆಯೇ ಕಾರಣ ಎಂಬುದಾಗಿ ಬಿಜೆಪಿ ನಾಯಕ ಜ್ಞಾನದೇವ್ ಅಹುಜಾ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ವಿವಾದಾತ್ಮಕ ಮಾತುಗಳಿಂದ ಸುದ್ದಿಯಲ್ಲಿರುವ ರಾಜಸ್ಥಾನದ ಬಿಜೆಪಿ ನಾಯಕ, ಮಾಜಿ ಶಾಸಕ ಜ್ಞಾನದೇವ್ ಅಹುಜಾ, ದೇವರನಾಡು ವಯನಾಡಿನ ದುರಂತಕ್ಕೆ ಕೇರಳದಲ್ಲಿನ ಗೋ ಹತ್ಯೆ ಚಟುವಟಿಕೆಗಳು ಕಾರಣ ಎಂದು ಹೇಳಿದ್ದು, ಎಲ್ಲೆಲ್ಲಿ ಗೋಹತ್ಯೆಗಳು ನಡೆಯುತ್ತವೆಯೋ, ಅಂತಹ ಸ್ಥಳಗಳಲ್ಲಿ ಈ ರೀತಿಯ ಘಟನೆಗಳು ನಡೆಯುವುದು ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಮಾಧ್ಯಮದ ಜತೆ ಮಾತನಾಡಿದ ಅಹುಜಾ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಂತಹ ಭಾಗಗಳಲ್ಲಿ ಕೂಡ ಮೇಘ ಸ್ಫೋಟ ಹಾಗೂ ಭೂ ಕುಸಿತದಂತಹ ನೈಸರ್ಗಿಕ ವಿಕೋಪಗಳು ಪದೇ ಪದೇ ಸಂಭವಿಸುತ್ತಲೇ ಇರುತ್ತವೆ. ಆದರೆ ಕೇರಳದಲ್ಲಿ ಸಂಭವಿಸಿದ ಘಟನೆಯಷ್ಟು ವಿನಾಶಕಾರಿ ಪರಿಣಾಮವನ್ನು ಅವು ಉಂಟುಮಾಡುವುದಿಲ್ಲ ಎಂದು ಹೇಳಿದ್ದಾರೆ.
2018ರಿಂದಲೂ, ಗೋ ಹತ್ಯೆ ವ್ಯಾಪಕವಾಗಿ ನಡೆಯುತ್ತಿರುವ ಪ್ರದೇಶಗಳಲ್ಲಿ ಅಂತಹ ದುರಂತ ಘಟನೆಗಳು ನಡೆಯುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಗೋ ಹತ್ಯೆ ತಡೆ ನಡೆಯದೆ ಹೋದರೆ, ಕೇರಳದಲ್ಲಿ ಇದೇ ರೀತಿಯ ಘಟನೆಗಳು ಮುಂದೆಯೂ ನಡೆಯುತ್ತಲೇ ಇರುತ್ತವೆ" ಎಂದು ಅಹುಜಾ ಎಚ್ಚರಿಕೆ ನೀಡಿದ್ದಾರೆ. 2017ರ ಡಿಸೆಂಬರ್ನಲ್ಲಿ ಅವರು, ಗೋ ಕಳ್ಳಸಾಗಣೆ ಅಥವಾ ಗೋ ಹತ್ಯೆಗಳಲ್ಲಿ ಯಾರಾದರೂ ತೊಡಗಿದ್ದರೆ ಅವರನ್ನು ಹೊಡೆದು ಸಾಯಿಸುವುದಾಗಿ ಎಚ್ಚರಿಕೆ ನೀಡಿದ್ದರು.