

ಹರಿಪ್ರಸಾದ್ ನಂದಳಿಕೆ ಕಾರ್ಕಳ ಕ್ರಿಸ್‌ಮಸ್ ಬಂತೆಂದರೆ ಕ್ರೈಸ್ತ ಸಮುದಾಯದ ಮನೆ ಮಂದಿಯ ಮನೆಯಂಗಳ ವಿದ್ಯುತ್‌ದೀಪಗಳಿಂದ ಕಂಗೊಳಿಸಿ, ಮನೆಯ ಮುಂದೊಂದು ಸುಂದರ ಗೋದಲಿ ನಿರ್ಮಾಣವಾಗುತ್ತದೆ. ಆದರೆ ನಂದಳಿಕೆ ಗ್ರಾಮದ ಹಿಂದು ಸಮುದಾಯದ ಮನೆಯ ಮುಂದೆ 6-7 ವರ್ಷಗಳಿಂದ ಗೋದಲಿ ನಿರ್ಮಾಣಗೊಳ್ಳುತ್ತಿರುವುದು ಸೌಹಾರ್ದಕ್ಕೆ ಸಾಕ್ಷಿಯಾಗಿದೆ. ಕ್ರಿಸ್‌ಮಸ್ ಸಂದರ್ಭ ಕ್ರೈಸ್ತರ ಮನೆಯ ವಠಾರದಲ್ಲಿ ಹಾಗೂ ಧರ್ಮಕೇಂದ್ರ ಚರ್ಚ್ ಸಮೀಪ ಗೋದಲಿಗಳು ಕಂಡು ಬರುವುದು ಸಾಮಾನ್ಯ. ಆದರೆ ಕಾರ್ಕಳದ ನಂದಳಿಕೆಯ ಹಿಂದು ಮನೆಯಂಗಳದಲ್ಲಿ ಗೋದಲಿ ನಿರ್ಮಿಸುತ್ತಿರುವುದು ಬಹಳ ವಿಶೇಷ. ನಂದಳಿಕೆಯ ನಿವಾಸಿ ಸರಳಾ ಎಸ್.ಹೆಗ್ಡೆ ಮನೆ ಮಂದಿಯೊಂದಿಗೆ ಸೇರಿಕೊಂಡು ವಿಶೇಷ ಗೋದಲಿ ನಿರ್ಮಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಧರ್ಮ ಬೇರೆಯಾದರೂ ದೇವರು ಎಲ್ಲರಿಗೂ ಒಂದೇ ಎನ್ನುವ ಮನೋಭಾವದಲ್ಲಿ ಕಳೆದ ಆರೇಳು ವರ್ಷಗಳಿಂದ ಗೋದಲಿ ನಿರ್ಮಾಣ ಮಾಡುವ ಮನಸ್ಸು ಮಾಡಿ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಬಣ್ಣ ಬಣ್ಣದ ಗೂಡು ದೀಪಗಳು, ವಿದ್ಯುತ್ ದೀಪಾಲಂಕಾರ, ಗದ್ದೆ, ಹಟ್ಟಿ, ಗೊಂಬೆಗಳು, ಬಾವಿ ಮನೆ ಹೀಗೆ ಅನೇಕ ಬಗೆಯ ಚಿತ್ರಣವನ್ನು ಈ ಗೋದಲಿಯಲ್ಲಿ ಕಾಣಬಹುದಾಗಿದೆ. ಇತಿಹಾಸ ಪ್ರಸಿದ್ಧ ನಂದಳಿಕೆಯ ಸಿರಿ ಜಾತ್ರೆ ಸಂದರ್ಭದಲ್ಲಿಯೂ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರಾಗಿ ತೊಡಗಿಕೊಳ್ಳುತ್ತಾರೆ. ಹೀಗಾಗಿ ನಂದಳಿಕೆ ಸುತ್ತಮುತ್ತಲಿನ ಪರಿಸರದಲ್ಲಿ ಜಾತಿ ಧರ್ಮ ಎನ್ನುವ ಭೇದಭಾವಗಳಿಲ್ಲದೆ ಸೌಹಾರ್ದತೆಯಿಂದ ಇದ್ದು, ಕ್ರೈಸ್ತರ ಹಬ್ಬದ ಸಂದರ್ಭ ಹಿಂದು ಮನೆಯಲ್ಲಿ ಗೋದಲಿ ನಿರ್ಮಿಸುವ ಮೂಲಕ ಸೇವೆಗೆ ಮುಂದಾಗಿದ್ದಾರೆ. ನಂದಳಿಕೆ ಗ್ರಾಮದಲ್ಲಿ ಹಿಂದು, ಕ್ರೈಸ್ತ ಎನ್ನುವ ಭೇದವನ್ನು ಮರೆತು ಎಲ್ಲರೂ ಜೊತೆಯಾಗಿ ಗ್ರಾಮದ ಅಭಿವೃದ್ಧಿ ಕಾರ್ಯದಲ್ಲಿ ಕೈ ಜೋಡಿಸುತ್ತಾರೆ. ಅಲ್ಲದೆ ಇತಿಹಾಸ ಪ್ರಸಿದ್ಧ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರತಿ ವರ್ಷವೂ ಸಿರಿಜಾತ್ರೆಯ ಸಂದರ್ಭ ಸುಮಾರು 50 ಕ್ಕೂ ಅಧಿಕ ಕ್ರೈಸ್ತರು ಸ್ವಯಂ ಸೇವಕರಾಗಿ ದುಡಿಯುತ್ತಾರೆ.ಅದೇ ಹಿನ್ನೆಲೆಯಲ್ಲಿ ಹಿಂದುಗಳ ಮನೆಯಲ್ಲೂ ಕ್ರಿಸ್‌ಮಸ್ ಹಬ್ಬಕ್ಕೆ ಮಹತ್ವ ಸಿಗುತ್ತಿದೆ. ನಮ್ಮಲ್ಲಿ ಕ್ರೈಸ್ತರು ಎಂಬ ಭೇದ ಭಾವವಿಲ್ಲದೆ ಸಹೋದರತೆಯಿಂದ ಒಗ್ಗಟ್ಟಿನಿಂದ ಇರುವುದರಿಂದ ಅವರ ಸಂಭ್ರಮದಲ್ಲಿ ಭಾಗಿಯಾಗಲಾಗುತ್ತಿದೆ. ಮನೆಯಲ್ಲೂ ಗೋದಲಿ ನಿರ್ಮಿಸಿ ಕ್ರೈಸ್ತರಿಗೆ ಕ್ರಿಸ್‌ಮಸ್ ಹಬ್ಬದ ಶುಭ ಹಾರೈಸಲಾಗಿದೆ. ಕಳೆದ 10 ದಿನಗಳಿಂದ ಗೋದಲಿ ನಿರ್ಮಾಣ ಕಾರ್ಯದಲ್ಲಿ ಮನೆ ಮಂದಿಯ ಜೊತೆ ಸರಳಾ ಎಸ್.ಹೆಗ್ಡೆ ತೊಡಗಿಕೊಂಡಿದ್ದು, ಈ ಬಾರಿ ಏಳನೇ ವರ್ಷದ ಗೋದಲಿಯನ್ನು ವಿಶೇಷವಾಗಿ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ಕ್ರೈಸ್ತರು ಹಾಗೂ ಹಿಂದುಗಳು ಕೂಡ ಗೋದಲಿ ವೀಕ್ಷಿಸಲು ಬರುತ್ತಿದ್ದು ಶಭಾಷ್ ಎನ್ನುತ್ತಿದ್ದಾರೆ.
ವರ್ಷದಿಂದ ವರ್ಷಕ್ಕೆ ವಿಶೇಷವಾಗಿ ಗೋದಲಿ ನಿರ್ಮಿಸಲಾಗುತ್ತಿದೆ. ಧರ್ಮ ಬೇರೆಯಾದರೂ ದೇವರು ಒಬ್ಬನೇ ಎನ್ನುವ ಮನೋಭಾವದಲ್ಲಿ ಮಾಡಿದ್ದೇವೆ. ನಮ್ಮದೊಂದು ಪುಟ್ಟ ಸೇವೆಯಷ್ಟೆ. ಸರಳಾ ಎಸ್.ಹೆಗ್ಡೆ, ಗೋದಲಿ ನಿರ್ಮಿಸಿದವರು.