

ಬೆಂಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟ ಶವ ಸಾಗಿಸಲು 18 ಸಾವಿರ ರೂ. ಕೊಡದ ಕಾರಣಕ್ಕೆ ಶವವನ್ನು ಪಾದಚಾರಿ ಮಾರ್ಗದಲ್ಲಿ ಇಟ್ಟು ಹೋಗಿದ್ದ ಆಂಬುಲೆನ್ಸ್ ಚಾಲಕನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಶರತ್ ಬಂಧಿತ ಚಾಲಕ. ಗುರುವಾರ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಿಸದೆ ರೋಗಿ ಮೃತಪಟ್ಟಿದ್ದರು. ಶವವನ್ನು ಹೆಬ್ಬಾಳದ ಚಿತಾಗಾರಕ್ಕೆ ಆಂಬುಲೆನ್ಸ್ನಲ್ಲಿ ತೆಗೆದುಕೊಂಡು ಬಂದಿದ್ದ. 18 ಸಾವಿರ ರೂ. ಕೊಡುವಂತೆ ಮೃತರ ಸಂಬಂಧಿಕರ ಬಳಿ ಬೇಡಿಕೆ ಇಟ್ಟಿದ್ದ.
ಇದಕ್ಕೆ ಒಪ್ಪದೆ ಇದ್ದಾಗ ಚಾಲಕ, ವಾಹನದಲ್ಲಿದ್ದ ಶವವನ್ನು ಪಾದಚಾರಿ ಮಾರ್ಗದಲ್ಲಿ ಇಟ್ಟು ಪರಾರಿ ಆಗಿದ್ದ. ಈ ಕುರಿತು ಮೃತನ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.