ಬೆಂಗಳೂರಿನಲ್ಲಿ ಭಾನುವಾರ 23 ಜನರಿಗೆ ಪಾಸಿಟಿವ್: 12 ಸೋಂಕಿತರಿಗೆ ಸಂಪರ್ಕವೇ ಇಲ್ಲ

06062020 Koppal Corona Positive Case
Published on

ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ 23 ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದರಲ್ಲಿ ಪ್ರಯಾಣದ ಇತಿಹಾಸ, ಸೋಂಕಿತರ ಸಂಪರ್ಕವಿಲ್ಲದ 12 ಜನರಿಗೆ ಸೋಂಕು ಪತ್ತೆಯಾಗಿದೆ. ಕೆಮ್ಮು, ನೆಗಡಿ ಹಾಗೂ ಜ್ವರದ ಲಕ್ಷಣಗಳಿಂದ ಪರೀಕ್ಷೆ ಮಾಡಿಸಿಕೊಂಡವರಿಗೆ ಸೋಂಕು ಕಂಡುಬರುತ್ತಿದೆ. ಭಾನುವಾರ ಇಬ್ಬರು ನಿಧನರಾಗಿದ್ದು, ಬೆಂಗಳೂರಿನಲ್ಲಿ ಒಟ್ಟು ಮೃತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ರಾಜಧಾನಿಯಲ್ಲಿ ಕರೊನಾ ∗ ಒಟ್ಟು ಸೋಂಕಿತರು 475  ∗  ಗುಣಮುಖರಾದವರು 298 ∗ ಸಕ್ರಿಯ ಪ್ರಕರಣಗಳು 149  ∗  ಮೃತಪಟ್ಟವರು 15 ∗ ಕ್ವಾರಂಟೈನ್​ನಲ್ಲಿರುವವರು 1840  ∗ ಕಂಟೇನ್ಮೆಂಟ್ ಪ್ರದೇಶ 52

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೊರ ರಾಜ್ಯಗಳಿಂದ ಆಗಮಿಸಿದ ಪ್ರಯಾಣಿಕರಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದರೆ, ಸಿಲಿಕಾನ್ ಸಿಟಿಯಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿದ್ದ ವ್ಯಕ್ತಿಗಳಿಗೆ ಕರೊನಾ ಪಾಸಿಟಿವ್ ಕಂಡುಬರುತ್ತಿದೆ. ಭಾನುವಾರದ 23 ಸೋಂಕಿತರಲ್ಲಿ ಇಬ್ಬರು ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯರಾಗಿದ್ದಾರೆ. ಉಳಿದ 10 ಜನರು ಕೆಮ್ಮು, ನೆಗಡಿ, ಶೀತ ಜ್ವರದ (ಐಎಲ್​ಐ) ಮಾದರಿ ಹೊಂದಿದ್ದಾರೆ. ವಿದೇಶದಿಂದ ವಾಪಸಾದ 2, ಪ್ರಾಥಮಿಕ ಸಂಪರ್ಕದ 3, ಆಂಧ್ರಕ್ಕೆ ಹೋಗಿಬಂದ 3, ಬಳ್ಳಾರಿಯಿಂದ ಆಗಮಿಸಿದ ವಿದ್ಯಾಪೀಠದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಅನಾರೋಗ್ಯವಿದ್ದರೆ ನಿರ್ಲಕ್ಷ್ಯ ಬೇಡ ನಗರದಲ್ಲಿ ಕೆಮ್ಮು, ನೆಗಡಿ, ಶೀತ ಹಾಗೂ ಜ್ವರದ ಲಕ್ಷಣಗಳು ಕಂಡುಬಂದವರು ಆಸ್ಪತ್ರೆಗೆ ಹೋಗಿ ಕರೊನಾ ತಪಾಸಣೆ ಮಾಡಿಸಿಕೊಂಡಲ್ಲಿ ಅವರಿಗೆ ಕರೊನಾ ಪಾಸಿಟಿವ್ ವರದಿ ಬರುತ್ತಿದೆ. ಹೀಗಾಗಿ ಯಾರೊಬ್ಬರೂ ಅನಾರೋಗ್ಯವನ್ನು ಕಡೆಗಣಿಸದೇ ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಸೋಂಕು ದೃಢಪಟ್ಟರೆ, ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚು.

ಒಂದೇ ಕುಟುಂಬದ ಮೂವರಿಗೆ ಕೋವಿಡ್: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಗೆ ಸಮಾರಂಭಕ್ಕೆಂದು ಹೋಗಿದ್ದ ರಾಜಾಜಿನಗರದ ನಿವಾಸಿಗಳಾದ ತಂದೆ, ತಾಯಿ ಹಾಗೂ 19 ವರ್ಷದ ಮಗನಿಗೆ ಸೋಂಕು ದೃಢಪಟ್ಟಿದೆ. ಅಂತಾರಾಜ್ಯ ಪ್ರಯಾಣದ ಕಾರಣ ಅವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿದೆ. ಇನ್ನು ದುಬೈನಿಂದ ಬಂದಿದ್ದ ವೃದ್ಧ ದಂಪತಿಗೂ ಸೋಂಕು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಬಳ್ಳಾರಿಗೆ ಹೋಗಿಬಂದಿದ್ದ ವಿದ್ಯಾಪೀಠ ವಾರ್ಡ್​ನ 58 ವರ್ಷದ ವ್ಯಕ್ತಿಗೂ ಸೋಂಕು ಪತ್ತೆಯಾಗಿದೆ. ಇಬ್ಬರ ಸಾವು: ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 61 ವರ್ಷದ ಮಹಿಳೆ ಮೇ 29ರಂದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಸೋಂಕು ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿತ್ತು. ಮಧುಮೇಹ, ರಕ್ತದೊತ್ತಡ, ಹೈಪೋಥೈರಾಯಿಡಿಸಂ ಸಮಸ್ಯೆಯಿಂದ ಬಳಲುತ್ತಿದ್ದ ಇವರು, 8 ದಿನಗಳಿಂದ ಚಿಕಿತ್ಸೆ ಪಡೆದುಕೊಂಡಿದ್ದರೂ ಗುಣಮುಖರಾಗದೇ ಶನಿವಾರ ಸಂಜೆ ಸಾವಿಗೀಡಾದರು. 57 ವರ್ಷದ ವ್ಯಕ್ತಿ ಬಿಪಿ, ಶುಗರ್, ಆನೆಕಾಲು ರೋಗ ಮತ್ತು ಕ್ಯಾನ್ಸರ್ ಕಾಯಿಲೆಯಿಂದ ಬಳುತ್ತಿದ್ದು, ಜೂ.3ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೂ ಸೋಂಕು ದೃಢಪಟ್ಟಿದ್ದು, ಭಾನುವಾರ ಮೃತರಾಗಿದ್ದಾರೆ.

ಸಮುದಾಯ ಸೋಂಕು ಭೀತಿ: ಭಾನುವಾರ ಪುಟ್ಟೇನಹಳ್ಳಿ ಸಮೀಪದ ಕೊತ್ತನೂರು, ಎಚ್​ಬಿಆರ್ ಲೇಔಟ್, ಸರ್ಜಾಪುರ ಮುಖ್ಯರಸ್ತೆಯ ಅರಳೂರು, ಯಲಹಂಕದ ಮಾಂಡವ್ಯ ಎನ್​ಕ್ಲೇವ್, ಚಾಮರಾಜಪೇಟೆ, ಮೈಸೂರು ರಸ್ತೆ, ಕವಿಕಾ ಲೇಔಟ್​ಗಳಲ್ಲಿ ತಲಾ ಒಬ್ಬರು ಸೋಂಕಿಗೆ ಒಳಗಾಗಿದ್ದಾರೆ. ಬೆನ್ಸನ್​ಪೇಟೆಯಲ್ಲಿ 2 ಹಾಗೂ ಕಲಾಸಿಪಾಳ್ಯ ಮೂವರು ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ನಗರದಲ್ಲಿ ಸೋಮವಾರದಿಂದ ಅನ್​ಲಾಕ್ ಆರಂಭವಾಗಲಿದ್ದು, ಮಾರುಕಟ್ಟೆ, ಮಾಲ್, ದೇವಾಲಯಗಳು ತೆರೆಯಲಿವೆ. ಜನರ ಮುಕ್ತ ಸಂಚಾರ ಮುಕ್ತವಾಗಲಿದ್ದು, ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿವೆ.

52 ಪ್ರದೇಶಗಳಲ್ಲಿ ಕಂಟೇನ್ಮೆಂಟ್: ನಗರದಲ್ಲಿ ಕಳೆದ 28 ದಿನಗಳಲ್ಲಿ ಕರೊನಾ ಸೋಂಕಿತರು ಪತ್ತೆಯಾದ ವಾರ್ಡ್​ಗಳಲ್ಲಿ ಮಾತ್ರ ಕಂಟೇನ್ಮೆಂಟ್ ವಿಧಿಸಲಾಗುತ್ತಿದೆ. ಅದರಂತೆ, 5 ಮಾದರಿಯ 52 ಪ್ರದೇಶಗಳಲ್ಲಿ ಕಂಟೇನ್ಮೆಂಟ್ ಜಾರಿಯಲ್ಲಿದೆ. ಇನ್ನು ಭಾನುವಾರ ಪತ್ತೆಯಾದ 12 ಹೊಸ ಪ್ರಕರಣಗಳು ಮತ್ತು ಹೊರಗಿಂದ ಬಂದು ಸೋಂಕಿಗೊಳಗಾದ ಪ್ರಯಾಣಿಕರ ವಾರ್ಡ್​ಗಳನ್ನೂ ಕಂಟೇನ್ಮೆಂಟ್ ಮಾಡಲಾಗುತ್ತಿದ್ದು, ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net