ಸುಧಾರಿತ ಪಠ್ಯಕ್ರಮ ತಿಂಗಳೊಳಗೆ ಸಿದ್ಧವಾಗಲಿದೆ ಎಂದ ಸಿಬಿಎಸ್​ಇ

cbse
Published on

ನವದೆಹಲಿ: ಕೋವಿಡ್-19 ನಿಂದಾಗಿ ಆಗಿರುವ ಶೈಕ್ಷಣಿಕ ವರ್ಷದ ನಷ್ಟಭರ್ತಿಗೆ ಕ್ರಮಗಳನ್ನು ತೆಗೆದುಕೊಂಡಿರುವ ಸೆಂಟ್ರಲ್ ಬೋರ್ಡ್​ ಆಫ್​ ಸೆಕೆಂಡರಿ ಎಜುಕೇಶನ್​ (ಸಿಬಿಎಸ್​ಇ) ಸುಧಾರಿತ ಪಠ್ಯಕ್ರಮಗಳನ್ನೂ ಸಿದ್ಧಪಡಿಸುತ್ತಿದೆ.ಹೊಸ ಪಠ್ಯಕ್ರಮದ ಗಾತ್ರ ಒಂದು ತಿಂಗಳ ಪಠ್ಯಕ್ರಮದಷ್ಟು ಕಡಿತವಾಗಿರಲಿದೆ ಎಂದು ಸಿಬಿಎಸ್​ಇ ಅಧ್ಯಕ್ಷ ಮನೋಜ್​ ಅಹುಜಾ ತಿಳಿಸಿದ್ದಾರೆ.

ಶಿಕ್ಷಣ ವ್ಯವಸ್ಥೆಯಲ್ಲಿ ದಿಢೀರ್ ಬದಲಾವಣೆ ತರುವುದು ಸಾಧ್ಯವಿಲ್ಲ.ಹಾಗೇನಾದೂ ಮಾಡಿದರೆ ಗೊಂದಲ ಮತ್ತು ಅನಿಶ್ಚಿತತೆ ಕಾಡಲಿದೆ. ಪಠ್ಯಕ್ರಮದ ಸುದಾರಣೆಯನ್ನು ಕಲಿಕಾ ಫಲಿತಾಂಶವನ್ನು ನೋಡಿಕೊಂಡು ಸರಿದೂಗಿಸಿಕೊಂಡು ಹೋಗಲಾಗುತ್ತಿದೆ.ನಾವು ಪಠ್ಯಕ್ರಮ ಸುಧಾರಣೆ ಮಾಡುತ್ತಿದ್ದೇವೆ. ಪ್ರಮುಖ ವಿಚಾರಗಳನ್ನು ಹಾಗೆಯೇ ಉಳಿಸಿಕೊಂಡು ಪಠ್ಯಕ್ರಮ ಪರಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಅವರು ಅಶೋಕಾ ಯೂನಿವರ್ಸಿಟಿ ಆಯೋಜಿಸಿದ್ದ 'ಫ್ಯೂಚರ್ ಆಫ್ ಸ್ಕೂಲ್ಸ್​: ಓವರ್​ಕಮಿಂಗ್​ ಕೋವಿಡ್​​-19 ಚಾಲೆಂಜ್​ ಆ್ಯಂಡ್ ಬಿಯಾಂಡ್​'ಎಂಬ ವಿಷಯ ಕುರಿತ ವರ್ಚುವಲ್ ಸಮಾವೇಶದಲ್ಲಿ ಭಾಗಿಯಾಗಿದ್ದರು.ಒಂದೊಮ್ಮೆ ಕೆಲವೊಂದು ವಿಚಾರಗಳು ಪುನರಾವರ್ತನೆಗೊಂಡರೆ ಅಥವಾ ಒಂದೇ ಪರಿಕಲ್ಪನೆ ಮೇಲೆ ಹೆಚ್ಚುವರಿ ಕೆಲಸ ಆಯಿತೆಂದರೆ ಅವುಗಳನ್ನೆಲ್ಲ ಪರಿಶೀಲಿಸಿ ಸರಿಪಡಿಸಬೇಕು. ಇದೆಲ್ಲವನ್ನೂ ಒಂದು ತಿಂಗಳ ಒಳಗೆ ಪೂರ್ಣಗೊಳಿಸುತ್ತೇವೆ ಎಂದು ಅವರು ಹೇಳಿದರು.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್​ 'ನಿಶಂಕ್​' ಏಪ್ರಿಲ್​ ತಿಂಗಳಲ್ಲಿ ಸಿಬಿಎಸ್​ಇ ಪಠ್ಯಕ್ರಮ ಕಡಿತಗೊಳಿಸಿ ಸುಧಾರಿತ ಪಠ್ಯಕ್ರಮ ಪ್ರಕಟಿಸಲಿದೆ ಎಂದು ಹೇಳಿದ್ದರು.ಇದಕ್ಕೆ ಪೂರಕವಾಗಿ ಎಚ್​ಆರ್​ಡಿ ಸಚಿವಾಲಯವೂ ಪರ್ಯಾಯ ವೇಳಾಪಟ್ಟಿಯೊಂದಿಗೆ ಲಾಕ್​ಡೌನ್​ ಅವಧಿಯ ಯೋಜನೆಯೊಂದಿಗೆ ಮುಂದೆ ಬಂದಿತ್ತು.ದೇಶದ ಬಹುತೇಕ ಶಾಲಾ ಕಾಲೇಜುಗಳು, ವಿವಿಗಳು ಮಾರ್ಚ್ 16ರಿಂದ ಮುಚ್ಚಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net