ತಾಯಿ ಮನವಿಗೆ ಮರುಗಿದ ನ್ಯಾಯಾಲಯ - ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜು.೧೦ಕ್ಕೆ ಮುಂದೂಡಿಕೆ - ಆರೋಪಿ ನಾಪತ್ತೆ

Published on

ಪುತ್ತೂರು: ಬಿಜೆಪಿ ಮುಖಂಡನ ಪುತ್ರ ವಂಚಿಸಿದ ಪ್ರಕರಣ ಸಂಬಂಧಿಸಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮಂಗಳೂರು ೬ನೇ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಗುರುವಾರ ನಡೆದಿದ್ದು, ಜುಲೈ ೧೦ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.

ಪ್ರಕರಣದ ವಿಚಾರಣೆ ವೇಳೆ, ಸಂತ್ರಸ್ತೆ ಪರವಾಗಿ ಆಕೆಯ ತಾಯಿ ನಮಿತಾ ನ್ಯಾಯಾಧೀಶರ ಮುಂದೆ ಹಾಜರಾದರು. ‘ಸಂತ್ರಸ್ತೆಗೆ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದ್ದು, ಆಕೆ ಮೂರು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಹಾಜರಾಗಲು ಸಾಧ್ಯವಾಗಿಲ್ಲ’ ಎಂದು ಮಾಹಿತಿ ನೀಡಿದರು. ಮುಂದುವರೆದು, ‘ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದಕ್ಕೆ ನಮ್ಮ ತೀವ್ರ ಆಕ್ಷೇಪವಿದೆ’ ಎಂದು ಮೌಖಿಕವಾಗಿ ವಿರೋಧ ಸ್ಪಷ್ಟಪಡಿಸಿದರು. ‘ನನ್ನ ಮಗಳು ಮೂರು ದಿನಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆಯಲ್ಲಿದ್ದಾಳೆ. ಆರೋಪಿಗೆ ಜಾಮೀನು ನೀಡಬಾರದು’ ಎಂದು ಮನವಿ ಮಾಡಿದ್ದಾರೆ.

ಸಂತ್ರಸ್ತೆಯ ತಾಯಿಯ ಆಕ್ಷೇಪಣೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರಿ ಅಭಿಯೋಜಕರು (ಪಿ.ಪಿ.) ಈ ಕುರಿತು ಲಿಖಿತ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದಾರೆ. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಜು.೧೦ಕ್ಕೆ ಮುಂದೂಡಿದೆ.

ಹತ್ತು ದಿನದಿಂದ ಹುಡುಕಾಟ!

ಮಹಿಳಾ ಠಾಣೆಯಲ್ಲಿ ಜೂನ್ ೨೪ರಂದು ಪ್ರಕರಣ ದಾಖಲಾಗಿದ್ದು, ಅಂದಿನಿಂದ ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ. ರಾವ್ ತಲೆ ಮರೆಸಿಕೊಂಡಿದ್ದಾನೆ. ವಿವಿಧ ತಂಡಗಳನ್ನು ಮಾಡಿಕೊಂಡು ಪೊಲೀಸರು ೧೦ ದಿನಗಳಿಂದ ಹುಡುಕಾಟ ನಡೆಸುತ್ತಿದ್ದಾರೆ. ವಿಚಾರಣೆ ಎದುರಿಸುವ ಭೀತಿಯಲ್ಲಿ ನಗರ ಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಆಸ್ಪತ್ರೆ ಸೇರಿದ್ದು, ಪೊಲೀಸರು ಅವರ ಮೇಲೆಯೂ ನಿಗಾ ಇಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net