

ಉತ್ತರ ಪ್ರದೇಶ: ಪ್ರೀತಿ ಕುರುಡೋ, ಪ್ರೇಮಿಗಳು ಕುರುಡೋ ನಿಜಕ್ಕೂ ಅಸ್ಪಷ್ಟ. ಪ್ರೀತಿ ಎಂಬ ಹೂವು ಯಾರ ಮನದಲ್ಲಿ, ಯಾರ ಮೇಲೆ, ಯಾವಾಗ? ಯಾಕಾಗಿ ಹುಟ್ಟುತ್ತದೆ ಎಂಬುದೇ ತಿಳಿಯದು (Couple Suicide). ಪ್ರೀತಿಯ ಜಾಲದಲ್ಲಿ ಬಿದ್ದು, ತಮ್ಮಿಷ್ಟದ ವ್ಯಕ್ತಿಗಳನ್ನು ಆರಿಸಿಕೊಳ್ಳುವುದು ಅವರವರಿಗೆ ಬಿಟ್ಟದ್ದು ಹಾಗೂ ಅವರ ವೈಯಕ್ತಿಕ ಆಯ್ಕೆ. ಅದರಲ್ಲೂ ಮದುವೆ ವಯಸ್ಸಿಗೆ ಬಂದ ಯುವ ಜೋಡಿಗಳಲ್ಲಿ ಈ ಇಷ್ಟಾರ್ಥಗಳು ಮೂಡಿದರೆ ಚೆಂದ. ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಇವೆಲ್ಲವೂ ಉಲ್ಟಾ ಆಗಿ ಹೋಗಿದೆ. ಮದುವೆಯಾಗಿ ಮೂರು ಮಕ್ಕಳಿದ್ದು, ಆ ಮಕ್ಕಳಿಗಿನ್ನೇನು ಕಂಕಣ ಕೂಡಿ ಬರಬೇಕು ಎನ್ನುವಷ್ಟರಲ್ಲಿ ಪೋಷಕರೇ ಇನ್ನೊಬ್ಬರನ್ನು ಗುಟ್ಟಾಗಿ ಪ್ರೀತಿಸುತ್ತಿರುತ್ತಾರೆ. ಅಂತಹದ್ದೊಂದು ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಮದುವೆಯಾಗಿ ಗಂಡ ಮತ್ತು ಇಬ್ಬರು ಮಕ್ಕಳಿದ್ದರೂ 19 ವರ್ಷ ವಯಸ್ಸಿನ ಹುಡುಗನೊಂದಿಗೆ ಅನೈತಿಕ ಸಂಬಂಧದಲ್ಲಿದ್ದ ಮಹಿಳೆ ಆರ್ತಿ, ಈ ಪ್ರೇಮವನ್ನು ನನ್ನಿಂದ ಮರೆಯಲು ಅಸಾಧ್ಯ ಎಂದು ದುಃಖಿಸುತ್ತಾ, ಸಾವಿನಲ್ಲಿ ನಾವಿಬ್ಬರು ಒಂದಾಗೋಣ ಎಂದು ಯುವಕನೊಂದಿಗೆ ವಿಷ ಸೇವಿಸಿ ಪ್ರಾಣಬಿಟ್ಟ ಘಟನೆ ಉತ್ತರ ಪ್ರದೇಶದ ಹುಸೇನ್ಪುರದಲ್ಲಿ ಸಂಭವಿಸಿದೆ. ಆಸ್ಪತ್ರೆಗೆ ದಾಖಲಾದ ಪ್ರಿಯಕರನು ಸಹ ಚಿಕಿತ್ಸೆ ಫಲಿಸದೆ ಉಸಿರು ಚೆಲ್ಲಿದ್ದಾನೆ.
ವರದಿಗಳ ಪ್ರಕಾರ, ಮೃತ ಆರತಿ ಜಗಮೋಹನ್ ಎಂಬ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳೂ ಇದ್ದರು. ಆದರೆ, ತನ್ನದೇ ಊರಿನ ಲಲಿತ್ ಎಂಬ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದ ಆರತಿ, ಆತನ ಜತೆಗೆ ಗುಟ್ಟಾಗಿ ಸಂಬಂಧ ನಿಭಾಯಿಸುತ್ತಿದ್ದಳು. ದಿನ ಕಳೆದಂತೆ ಇಬ್ಬರ ನಡುವಿನ ಅನೈತಿಕ ಸಂಬಂಧ ಊರಿನವರಿಗೆ ಗೊತ್ತಾಯಿತು. ಈ ವಿಷಯ ಹೊರಬೀಳುತ್ತಿದ್ದಂತೆ ಎಚ್ಚೆತ್ತುಕೊಂಡ ಇಬ್ಬರು, ಮನೆ ಬಿಟ್ಟು ಪರಾರಿಯಾದರು.
ಪತ್ನಿಯ ಕಳ್ಳಾಟವನ್ನು ಪತ್ತೆಹಚ್ಚಿದ ಪತಿ, ತಕ್ಷಣವೇ ಪೊಲೀಸ್ ಠಾಣೆಯಲ್ಲಿ ಆರತಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ದೂರು ಸಲ್ಲಿಸಿದ. ಈ ದೂರಿನ ಅನ್ವಯ ಇಬ್ಬರನ್ನು ಊರಿಂದ ಹೊರಹೋಗದಂತೆ ವಾಪಾಸ್ ಕರೆದುಕೊಂಡ ಬಂದ ಪೊಲೀಸರು, ಸಮಸ್ಯೆಯನ್ನು ಕುಳಿತು ಬಗೆ ಹರಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ವೇಳೆ, ಗಂಡನ ಜತೆಯಲ್ಲೇ ಇರುತ್ತೀನಿ ಎಂದು ಆರತಿ ಒಪ್ಪಿಕೊಂಡಿದ್ದನ್ನು ಕಂಡ ಕುಟುಂಬಸ್ಥರು ಸಮಸ್ಯೆ ಬಗೆಹರಿಯಿತು ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಅದು ಅಲ್ಲಿಗೆ ಮುಗಿದಿರಲಿಲ್ಲ.
ಆರತಿ ಮತ್ತು ಆಕೆಯ ಪ್ರೇಮಿ ಇಬ್ಬರು ದೂರದಲ್ಲಿ ಇದ್ದುಕೊಂಡೇ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಇಡೀ ಸಮಾಜ ನಮ್ಮನ್ನು ಒಪ್ಪದಿದ್ದರೆ ಏನು? ನಾವಿಬ್ಬರು ಸಾವಿನಲ್ಲಾದರೂ ಒಂದಾಗೋಣ ಎಂದು ಆರತಿ ನಿರ್ಧರಿಸಿ, ಲಲಿತ್ ಜತೆಗೆ ಕಾಡಿನಲ್ಲಿ ವಿಷ ಸೇವಿಸಿದ್ದಾಳೆ. ಇವರಿಬ್ಬರನ್ನು ಗಮನಿಸಿದ ಸ್ಥಳೀಯರೊಬ್ಬರು, ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವಿಗೀಡಾಗಿದ್ದಾರೆ. ಎರಡು ಮಕ್ಕಳ ಬಗ್ಗೆ ಕಿಂಚಿತ್ತು ಯೋಚಿಸದೆ, ಆತ್ಮಹತ್ಯೆಗೆ ಶರಣಾದ ಮಹಿಳೆ ಇದೀಗ ಮಕ್ಕಳನ್ನು ಅನಾಥವಾಗಿ ಮಾಡಿರುವುದು ಸದ್ಯ ಗ್ರಾಮಸ್ಥರನ್ನು ಕಂಬನಿ ಮಿಡಿಯುವಂತೆ ಮಾಡಿದೆ,(ಏಜೆನ್ಸೀಸ್).