

ಮೈಸೂರು: ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದ ಈ ಜೋಡಿ, ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸೋಕೆ ಹೋಗಿ ಜೀವವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ ತಿ.ನರಸೀಪುರ ತಾಲೂಕಿನ ಮುಡುಕುತೊರೆ ಬಳಿ ನಡೆದಿದೆ.
ನವೆಂಬರ್ 22ರಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಚಂದ್ರು(28) ಮತ್ತು ಶಶಿಕಲಾ (20) ಮೃತರು. ಇವರಿಬ್ಬರೂ ಕಾವೇರಿ ನದಿ ಮಧ್ಯೆ ತೆಪ್ಪದಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡುತ್ತಿದ್ದರು. ಆದರೆ ತೆಪ್ಪ ಮಗುಚಿದ ಪರಿಣಾಮ ಇಬ್ಬರೂ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.
ಚಂದ್ರು ಹಾಗೂ ಶಶಿಕಲಾ ಇಬ್ಬರೂ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳು. ಸಂಭ್ರಮದಿಂದ ಫೋಟೋ ಶೂಟ್ ಮಾಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು. ಇದಕ್ಕಾಗಿ ಎರಡು ತೆಪ್ಪದಲ್ಲಿ ಒಟ್ಟು ಐವರು ನದಿ ಮಧ್ಯೆ ತೆರಳಿದ್ದರು. ಚಂದ್ರು-ಶಶಿಕಲಾ ಒಂದು ತೆಪ್ಪದಲ್ಲಿದ್ದರೆ, ಫೋಟೋಗ್ರಾಫರ್ ಮತ್ತು ಸಂಬಂಧಿಕರಿಗಾಗಿ ಇನ್ನೊಂದು ತೆಪ್ಪ ಸಿದ್ಧಪಡಿಸಲಾಗಿತ್ತು. ಹರಿಯುತ್ತಿರುವ ನೀರಿನ ಮಧ್ಯೆ ತೆಪ್ಪದಲ್ಲಿ ನಿಂತು ಫೋಸ್ ಕೊಟ್ಟಿದ್ದರು. ಆದರೆ ಆ ತೆಪ್ಪ ಮಗುಚಿ ಇಬ್ಬರೂ ಮೃತಪಟ್ಟಿದ್ದಾರೆ. ಇವರಿಬ್ಬರ ಶವವನ್ನೂ ನೀರಿನಿಂದ ಹೊರತೆಗೆಯಲಾಗಿದೆ.
ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.