ಆರೋಗ್ಯಾಧಿಕಾರಿ ವಿರುದ್ಧ ಭ್ರಷ್ಟಾಚಾರ ಆರೋಪ

Yash 2
Published on

ಶಿಸ್ತು ಕ್ರಮಕ್ಕೆ ಶಾಸಕ ಯಶ್​ಪಾಲ್​ ಆಗ್ರಹ

ಉಡುಪಿ ಜಿಲ್ಲಾಧಿಕಾರಿಗೆ ಪತ್ರ ರವಾನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿರುವ ಬಸವರಾಜ ಜಿ. ಹುಬ್ಬಳ್ಳಿ ಅವರು 4 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಕಾರ್ಯವೈಖರಿ ಕುರಿತಾಗಿ ಹಲವಾರು ದೂರುಗಳು ಕೇಳಿ ಬರುತ್ತಿವೆ. ತನ್ನಿಮಿತ್ತ ತಕ್ಷಣವೇ ಅಧಿಕಾರಿಯ ವಿರುದ್ಧದ ಆರೋಪಗಳ ಕುರಿತಾಗಿ ತನಿಖೆ ನಡೆಸಿ, ಸತ್ಯವಿದ್ದಲ್ಲಿ ಶಿಸ್ತು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಜುಲೈ 22ರಂದು ಪತ್ರ ಬರೆದು ಆಗ್ರಹಿಸಿದ್ದಾರೆ.

ಮೌಖಿಕ ದೂರು

ಅಧೀನ ವೈದ್ಯರು, ವೈದ್ಯಾಧಿಕಾರಿಗಳು, ಶುಶ್ರೂಷಕರು ಹಾಗೂ ಸಿಬ್ಬಂದಿ ಸೇವಾ ವಿಷಯದಲ್ಲಿ ವ್ಯಾಪಕ ಭ್ರಷ್ಟಾಚಾರ ಮಾಡಿರುವ ಬಗ್ಗೆ ಮೌಖಿಕ ದೂರುಗಳು ಬರುತ್ತಿವೆ. ಬಿಲ್​ ಪಾವತಿ, ಟೆಂಡರ್​ ಮತ್ತಿತರ ವಿಷಯದಲ್ಲೂ ಭ್ರಷ್ಟಾಚಾರ ಎಸಗುತ್ತಿರುವ ಬಗ್ಗೆ ಆರೋಪಗಳಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೇಲ್ನೋಟಕ್ಕೆ ಆರೋಪಗಳು ಸತ್ಯ

ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಡಾ. ಪಿ.ವಿ. ಭಂಡಾರಿ ಅವರು ಜಿಲ್ಲಾ ಆರೋಗ್ಯಾಧಿಕಾರಿಯ ಭ್ರಷ್ಟಾಚಾರದ ಬಗ್ಗೆ ಗಮನಕ್ಕೆ ತಂದಿದ್ದು, ತುರ್ತಾಗಿ ಕ್ರಮ ವಹಿಸುವಂತೆ ಕೋರಿದ್ದಾರೆ. ಸಿಬ್ಬಂದಿ ವರ್ಗಾವಣೆಗೆ ಅರ್ಹರ ಪಟ್ಟಿ ತಯಾರಿಸುವಲ್ಲೂ ಸಹ ಭ್ರಷ್ಟಾಚಾರದ ಆರೋಪಗಳಿವೆ. ಈ ಕುರಿತು ಸ್ಥಳಿಯವಾಗಿ ವಿಚಾರಿಸಿದಾಗ ಮೇಲ್ನೋಟಕ್ಕೆ ಅವರ ಮೇಲಿರುವ ಆರೋಪಗಳು ಸತ್ಯವಾಗಿರುವಂತೆ ಕಂಡು ಬರುತ್ತಿದೆ ಎಂದು ಯಶ್​ಪಾಲ್​ ಸುವರ್ಣ ಪತ್ರದಲ್ಲಿ ತಿಳಿಸಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಉತ್ತಮ ಸೇವೆಗೆ ಹೆಸರಾಗಿರುವ ಉಡುಪಿಯಂತಹ ಮುಂದುವರಿದ ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿಯ ಇಂತಹ ಕಾರ್ಯ ವೈಖರಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ತಕ್ಷಣವೇ ಅಧಿಕಾರಿಯನ್ನು ವರ್ಗಾಯಿಸಬೇಕು. ಅವರ ಕರ್ತವ್ಯದ ಅವಧಿಯಲ್ಲಿ ಕೈಗೊಂಡ ತೀರ್ಮಾನ, ವಿಲೇವಾರಿಯಾದ ಕಡತಗಳ ಬಗ್ಗೆ ತನಿಖೆ ನಡೆಸಿ, ಸೂಕ್ತ ಶಿಸ್ತು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. | ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net