ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ 207 ಮಂದಿಗೆ ನೇಮಕಾತಿ ಪತ್ರ ವಿತರಿಸಿ ಸಚಿವ ರಹೀಂ ಖಾನ್ ಭರವಸೆ

mng-sep6-ambedkar2
Published on

ಮಂಗಳೂರು: ಸಮಾಜದ ಸ್ವಾಸ್ಥೃ ಕಾಪಾಡುವ ಪೌರ ಕಾರ್ಮಿಕರಿಗೆ ಎಲ್ಲರೂ ಗೌರವ ನೀಡಬೇಕು. ಅವರ ಹಲವು ಬೇಡಿಕೆಗಳು ಸರ್ಕಾರ ಮುಂದಿದ್ದು, ಶೀಘ್ರದಲ್ಲೇ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು.
ನಗರದ ಉರ್ವ ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಯ್ಕೆಯಾಗಿರುವ 207 ಪೌರ ಕಾರ್ಮಿಕರಿಗೆ ಖಾಯಂ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.


ಪೌರ ಕಾರ್ಮಿಕರ ಶೇ.100 ಬೇಡಿಕೆ ಈಡೇರಿಸಲು ಸಂಘದ ಅಧ್ಯಕ್ಷ, ಕಾರ್ಯದರ್ಶಿ ಜತೆ ಚರ್ಚೆ ನಡೆದಿದೆ. ಆ ಪೈಕಿ ಶೇ.80ರಷ್ಟು ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ಇನ್ನು ಶೇ.20ರಷ್ಟು ಮಂದಿ ಚಾಲಕರು, ವಾಟರ್‌ಮೆನ್‌ಗಳ ನೇಮಕಾತಿ ಎರಡನೇ ಪಟ್ಟಿಯಲ್ಲಿ ಖಾಯಂ ಆಗಲಿದೆ. ಸಿಎಂ ಮತ್ತು ಹಣಕಾಸು ಇಲಾಖೆ ಜತೆ ಮಾತುಕತೆ ನಡೆಸಿ ಅಂತಿಮಗೊಳಿಸಲಾಗುವುದು ಎಂದರು.


ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಪೌರ ಕಾರ್ಮಿಕರ ಹಲವಾರು ವರ್ಷದ ಸೇವೆಗೆ ಅಂಗೀಕಾರ ಸಿಕ್ಕಿದೆ. ಪೌರ ಕಾರ್ಮಿಕರಿಗೆ ಸಿಗಬೇಕಾದ ಹಕ್ಕು ಕಲ್ಪಿಸಲು ಅಧಿಕಾರಿ ವರ್ಗ ಒತ್ತು ನೀಡಬೇಕು. ಅವರ ಬಗ್ಗೆ ಸಮಾಜ ಕಾಳಜಿ ವಹಿಸಬೇಕು. ದಾವಣಗೆರೆಯಲ್ಲಿ ಪಾಲಿಕೆ ಆಯುಕ್ತನಾಗಿದ್ದಾಗ ನಿವೃತ್ತರಾಗುವ ಪೌರ ಕಾರ್ಮಿಕರಿಗೆ ಅವರ ಕರ್ತವ್ಯದ ಕೊನೇ ದಿನ ಅವರಿಗೆ ಸಿಗಬೇಕಾದ ಹಣದ ಚೆಕ್ ನೀಡಿ ಮನೆಗೆ ಕಳುಹಿಸುತ್ತಿದ್ದೆವು. ಅವರಿಗೆ ಸಿಗಬೇಕಾದ ಸೌಲಭ್ಯ ಸಕಾಲದಲ್ಲಿ ಸಿಕ್ಕಿದರೆ ಮಾತ್ರ ಅವರ ಸೇವೆಗೆ ಗೌರವ ಸಂದಂತಾಗುತ್ತದೆ ಎಂದರು.


ಪೌರಾಡಳಿತ ಇಲಾಖೆಯ ನಿರ್ದೇಶಕಿ ಮಂಜುಶ್ರೀ, ಪೌರಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ನಾಗಣ್ಣ, ಮಂಗಳೂರು ಡಿಯುಡಿಸಿ ಯೋಜನಾ ನಿರ್ದೇಶಕರಾದ ಅಭಿಷೇಕ್ ವಿ.ಎಸ್. ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net