ಬೆಂಗಳೂರು: ಸಾಂಸ್ಕೃತಿಕ ಲೋಕವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಕಾರ್ಪೊರೇಟ್ ಕ್ಷೇತ್ರ ಯತ್ನಿಸುತ್ತಿದ್ದು, ಈ ಬಗ್ಗೆ ತಜ್ಞರು ಎಚ್ಚರ ವಹಿಸುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಜಿ.ಎನ್.ಮೋಹನ್ ಅಭಿಪ್ರಾಯಿಸಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿ ಅೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಿಂಗಳ ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿ ಗೌರವವನ್ನು ಸ್ವೀಕರಿಸಿ ಮಾತನಾಡಿದರು.
ನಾಲ್ಕು ಗೋಡೆ ನಡುವಿನ ರಂಗಭೂಮಿಯನ್ನು ಜನರ ಬಳಿಗೆ ಕೊಂಡೊಯ್ಯಲು ದೊಡ್ಡ ಚಳವಳಿ ನಡೆಯಿತು. ಅದರ ಮೂಲಕ ಜನರ ಸಮಸ್ಯೆಗಳನ್ನು ಬಿಂಬಿಸುವ ಕೆಲಸ ನಡೆಯಿತು. ಆದರೆ ಈಗ ಕಾರ್ಪೊರೇಟ್ ಕ್ಷೇತ್ರ ಜನರ ಬಳಿಯಿಂದ ಕಿತ್ತು ಮತ್ತೆ ನಾಲ್ಕು ಗೋಡೆಯ ಮಧ್ಯೆ ಬಂಧಿಸಲು ಯತ್ನಿಸುತ್ತಿದೆ. ಸಾಹಿತ್ಯ ಹಾಗೂ ರಂಗಭೂಮಿಯ ಮೇಲೆ ಭಯದ ಪರದೆಯನ್ನು ಸೃಷ್ಟಿಸಿ ಅವು ಸ್ವಯಂ ಸೆನ್ಸಾರ್ ಶಿಪ್ ಹೇರಿಕೊಳ್ಳುವಂತೆ ಪ್ರಭುತ್ವ ಒತ್ತಾಯಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಇದರ ವಿರುದ್ಧ ರಂಗ ಲೋಕ ಎಚ್ಚೆತ್ತುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂತೋಷ ನಾಯಕ ಪಟ್ಲ ನಿರ್ದೇಶನದ ’ದಿ ಫೈಯರ್’ ನಾಟಕವನ್ನು ಉಡುಪಿಯ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪ್ರದರ್ಶಿಸಿತು. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಸದಸ್ಯ ಜಗದೀಶ್ ಜಾಲ, ಲವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವಿಪತ್ತು ನಿರ್ವಹಣೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ತುಷಾರ್ ಗಿರಿನಾಥ್ ಸೂಚನೆ