

ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದಾಗಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಎಲ್ಲ ಎಲ್ಕೆಜಿ, ಯುಕೆಜಿ ಸೇರಿ ಪ್ರಾಥಮಿಕ ಶಾಲೆಗಳಿಗೂ ಇಂದಿನಿಂದ (ಮಾ.10)ರಿಂದ ರಜೆ ಘೋಷಣೆ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಮೊದಲು ಪೂರ್ವ ಪ್ರಾಥಮಿಕ, ಎಲ್ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಮಾ.9ರಿಂದ ರಜೆ ನೀಡಿದ್ದ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು.
ರಾಜ್ಯಾದ್ಯಂತ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 1 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ವಾರ್ಷಿಕ ಪರೀಕ್ಷೆಗಳನ್ನು ಮಾಡಿ ಮುಗಿಸಿ, ಬೇಸಿಗೆ ರಜೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ, 1 ರಿಂದ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಾ.11ರಿಂದ 16ರವರೆಗೆ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಬೇಕು ಹಾಗೂ 6ರಿಂದ 9ನೇ ತರಗತಿವರೆಗಿನ ಪರೀಕ್ಷೆಗಳನ್ನು ಮಾರ್ಚ್ 23ರೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿತ್ತು.
ಒಂದೆಡೆ ಸುರೇಶ್ ಕುಮಾರ್ ಅವರು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಎಲ್ಲ ಯುಕೆಜಿ, ಎಲ್ಕೆಜಿ, ನರ್ಸರಿ, ಪ್ರಾಥಮಿಕ ಶಾಲೆಗಳಿಗೂ ರಜಾ ಘೋಷಿಸಿದ್ದಾಗಿ ತಿಳಿಸಿದ್ದರು. ಇನ್ನೊಂದೆಡೆ ಈ ಸುತ್ತೋಲೆಯಲ್ಲಿ ಹೀಗೆ ಉಲ್ಲೇಖವಾಗಿದ್ದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿತ್ತು.
ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾ.9ರಂದು ರಾತ್ರಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲ ಯುಕೆಜಿ, ಎಲ್ಕೆಜಿ, ನರ್ಸರಿ, ಪ್ರಾಥಮಿಕ ಶಾಲೆಗಳಿಗೆ ಮಾ.10ರಿಂದ ಅನ್ವಯ ಆಗುವಂತೆ ರಜಾ ಘೋಷಣೆ ಮಾಡಲಾಗಿದೆ.
ಸದ್ಯ ನಡೆಯುತ್ತಿರುವ ಪಿಯುಸಿ ಪರೀಕ್ಷೆಗಳು ನಿಲ್ಲುವುದಿಲ್ಲ. ನಿಗದಿಯಂತೆ ಮಾ.27ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳೂ ನಡೆಯುತ್ತವೆ. ಆದರೆ ಪ್ರಾಥಮಿಕ ಅಂದರೆ 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಮಾ.10ರಿಂದಲೇ ರಜೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಅಂದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸೂಚನೆ ರಾಜ್ಯದ ಉಳಿದ ಜಿಲ್ಲೆಗಳ ಎಲ್ಲ ಶಾಲೆಗಳಿಗೆ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ 6 ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅನ್ವಯ ಆಗುತ್ತದೆ.