ಐಪಿಎಲ್ ತಂಡಗಳ ತವರಲ್ಲಿ ಕರೊನಾರ್ಭಟ!

IPL 6 June 20
Published on

ಬೆಂಗಳೂರು: ಕ್ರಿಕೆಟ್ ಆಟವನ್ನು ಧರ್ಮದಂತೆ ಪ್ರೀತಿಸುವ ದೇಶ ಭಾರತ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಏಪ್ರಿಲ್-ಮೇನಲ್ಲಿ ಐಪಿಎಲ್ 13ನೇ ಆವೃತ್ತಿಯ 60 ಟಿ20 ಪಂದ್ಯಗಳನ್ನು ಸವಿದು ಇಷ್ಟೊತ್ತಿಗೆ ಹೊಸ ಚಾಂಪಿಯನ್ ತಂಡದೊಂದಿಗೆ ಸಂಭ್ರಮಿಸುತ್ತಿರಬೇಕಾಗಿತ್ತು. ಆದರೆ ಮಾರ್ಚ್​ನಲ್ಲಿ ಶುರುವಾದ ಕರೊನಾ ಹಾವಳಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಲಾಕ್​ಡೌನ್​ನಿಂದಾಗಿ ಕ್ರೀಡಾ ಚಟುವಟಿಕೆಗಳೂ ಸಂಪೂರ್ಣ ಸ್ತಬ್ಧಗೊಂಡಿದ್ದವು. ಇದೇ ವೇಳೆ, ಐಪಿಎಲ್ ಹಬ್ಬವನ್ನು ಸಂಭ್ರಮಿಸುತ್ತಿರಬೇಕಾದ 8 ಫ್ರಾಂಚೈಸಿಗಳ ತವರು ನಗರಗಳ ಜನರು ಕರೊನಾ ಮಹಾಮಾರಿಯ ವಿರುದ್ಧ ಹೋರಾಡುವಂತಾಗಿರುವುದು ವಿಪರ್ಯಾಸ.

ಭಾರತದಲ್ಲಿ ಕರೊನಾ ಪ್ರಕರಣಗಳು ಈಗಾಗಲೆ 2 ಲಕ್ಷದ ಗಡಿ ದಾಟಿದ್ದು, 6 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಶೇ. 45 ಪ್ರಕರಣಗಳು ಮತ್ತು ಶೇ. 47ರಷ್ಟು ಸಾವು ಐಪಿಎಲ್ ಪಂದ್ಯಗಳು ನಡೆಯುವ ಪ್ರಮುಖ 8 ನಗರಗಳಲ್ಲೇ ದಾಖಲಾಗಿವೆ. ಅದರಲ್ಲೂ ಐಪಿಎಲ್ ಟೂರ್ನಿಯ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ಕಿಂಗ್ಸ್ ತಂಡಗಳ ತವರಿನಲ್ಲೇ ಅತ್ಯಧಿಕ ಕರೊನಾ ಪ್ರಕರಣಗಳಿವೆ. ಇದನ್ನೂ ಓದಿ: ಎರಡು ಲಕ್ಷ ಸೋಂಕಿತರಿದ್ದರೂ ಭಾರತ ಭಯಪಡಬೇಕಿಲ್ಲ; ವಿಶ್ವ ಆರೋಗ್ಯ ಸಂಸ್ಥೆಗೆ ಏಕಿಂಥ ವಿಶ್ವಾಸ…?

ಇನ್ನು ಕೋಲ್ಕತ ನೈಟ್​ರೈಡರ್ಸ್ ತಂಡದ ತವರಿನಲ್ಲಿ ಅಂಫಾನ್ ಚಂಡಮಾರುತದಿಂದಲೂ ಸಾಕಷ್ಟು ಹಾನಿಯಾಗಿದೆ. ಇದರಿಂದಾಗಿ ಈ ನಗರಗಳಲ್ಲಿ ಕ್ರೀಡಾಂಗಣ ಮತ್ತು ಪಿಚ್​ಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಕೂಡ ಕಷ್ಟವಾಗಿದೆ. ರಾಜಸ್ಥಾನದ ಮಟ್ಟಿಗೆ ಜೈಪುರ ಕೂಡ ಕರೊನಾದಿಂದ ಅತ್ಯಧಿಕ ತೊಂದರೆ ಎದುರಿಸಿದ ನಗರವಾಗಿದೆ.

ಬಿಸಿಸಿಐ ಈಗಲೂ ಐಪಿಎಲ್ ಟೂರ್ನಿ ಆಯೋಜನೆ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಆದರೆ ವಿಶ್ವದ ಶ್ರೀಮಂತ ಟೂರ್ನಿಯಲ್ಲಿ ಪಾಲ್ಗೊಳ್ಳುವ 8 ಫ್ರಾಂಚೈಸಿಗಳ ತವರು ನಗರದ ಕರೊನಾ ಹಾವಳಿ ಹೆಚ್ಚಾಗಿರುವ ಕಳವಳಕಾರಿ ಅಂಶವನ್ನು ಗಮನಿಸಿದಾಗ ಸದ್ಯಕ್ಕೆ ಐಪಿಎಲ್ ಟೂರ್ನಿ ಆಯೋಜನೆ ಜಟಿಲವೆನಿಸುತ್ತಿದೆ.

ಆರ್​ಸಿಬಿ ತವರಿಗೆ ಮೇಲುಗೈ

ಐಪಿಎಲ್​ನ ಎಲ್ಲ 12 ಆವೃತ್ತಿಗಳಲ್ಲಿ ಆಡಿದರೂ ಒಮ್ಮೆಯೂ ಚಾಂಪಿಯನ್ ಪಟ್ಟವೇರದೆ ಅಸ್ಥಿರ ನಿರ್ವಹಣೆ ತೋರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ನಗರ ಕರೊನಾ ವಿರುದ್ಧದ ಹೋರಾಟದಲ್ಲಿ ಉಳಿದೆಲ್ಲ ಮೆಟ್ರೋ ನಗರಗಳಿಗಿಂತ ಮೇಲುಗೈ ಸಾಧಿಸಿದೆ. ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಆರ್​ಸಿಬಿಯ ತವರು ನಗರ ಬೆಂಗಳೂರು, 7ನೇ ಸ್ಥಾನದಲ್ಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್​ನ ತವರು ಚಂಡೀಗಢ ದಲ್ಲಿ (ಮೊಹಾಲಿ) ಬೆಂಗಳೂರಿಗಿಂತ ಕಡಿಮೆ ಪ್ರಕರಣಗಳಿವೆ. ಇದನ್ನೂ ಓದಿ: ವರ್ಕೌಟ್ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವ ದೀಪಿಕಾ ಪಲ್ಲಿಕಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net