

ಬೆಂಗಳೂರು: ರಾಜ್ಯದಲ್ಲಿ ಕರೊನಾ ಪ್ರಕರಣ ದಿನದಿಂದ ದಿನಕ್ಕೆ ಏರುತ್ತಿದ್ದು, ಜನರಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಅಂಕಿ-ಅಂಶಗಳನ್ನು ನೋಡಿದಾಗ ರಾಜಧಾನಿ ಬೆಂಗಳೂರು ಅಪಾಯದ ಸ್ಥಿತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಸಿಲಿಕಾನ್ ಸಿಟಿಗೆ ಭಾರಿ ಗಂಡಾಂತರ ಕಾದಿದೆಯಾ ಎಂಬ ಭಯ ಜನರಲ್ಲಿ ಕಾಡ ತೊಡಗಿದೆ.
ಹೌದು, ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಗೂ ಕರೊನಾ ವ್ಯಾಪಿಸಿದೆಯಾ ಎಂಬ ಆತಂಕ ಎದುರಾಗಿದೆ. ನಗರದಲ್ಲಿ ನಿನ್ನೆ ಒಂದೇ ದಿನ ನಾಲ್ವರು ಸಾವಿಗೀಡಾಗಿದ್ದರು. ಇಂದು ಈಗಾಗಲೇ ಇಬ್ಬರು ಕರೊನಾದಿಂದ ಸಾವಿಗೀಡಾಗಿದ್ದಾರೆಂದು ಹೇಳಲಾಗುತ್ತಿದೆ. ಇದರ ನಡುವೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಸಂಜೆ ವರದಿಯು ಸಹ ಬರಲಿದ್ದು, ಎಲ್ಲರ ದೃಷ್ಟಿ ನೆಟ್ಟಿದೆ.
ಈಗಾಗಲೇ ರಾಜಧಾನಿಯಲ್ಲಿ 29 ಮಂದಿ ಕರೊನಾ ಮೃತ್ಯಕೂಪಕ್ಕೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಪ್ರತಿದಿನ ಮೊದಲು ಅಥವಾ ಎರಡನೇ ಸ್ಥಾನದಲ್ಲಿ ಬರುತ್ತಿದೆ. ಪ್ರತಿದಿನ ಹೊಸ ಹೊಸ ವಾರ್ಡ್ಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿವೆ. ಈಗಾಗಲೇ 198 ವಾರ್ಡ್ಗಳಲ್ಲಿ ಬರೋಬ್ಬರಿ 116 ವಾರ್ಡ್ಗಳಿಗೆ ಕರೊನಾ ಕಾಲಿಟ್ಟಿದೆ. ಇದು ಆರೋಗ್ಯ ಇಲಾಖೆಯ ತಲೆ ನೋವಿಗೂ ಕಾರಣವಾಗಿದೆ. ಇದನ್ನೂ ಓದಿ: ಮಂಗಳಮುಖಿ ಆಗಲು ಹೊರಟಿದ್ದ ಬಾಲಕನ ಬದುಕಲ್ಲಿ ರೋಚಕ ತಿರುವು!
ಈ ಅಂಶಗಳನ್ನು ಗಮನಿಸಿದರೆ ಮಹಾರಾಷ್ಟ್ರದ ಮುಂಬೈಗೆ ಆಗಿರುವ ಸ್ಥಿತಿ ಬೆಂಗಳೂರಿಗೂ ಆಗಲಿದೆಯಾ ಎಂಬ ಆತಂಕ ಕಾಡತೊಡಗಿದೆ. ಕೆಲವರಲ್ಲಿ ಲಕ್ಷಣಗಳಿಲ್ಲದಿದ್ದರೂ ಸೋಂಕು ಕಾಣಿಸಿಕೊಂಡಿರುವುದು ಮತ್ತಷ್ಟು ಚಿಂತೆಗೆ ದೂಡಿದೆ. ಇನ್ನು ಕೆಲವರಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಸದ್ಯ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 617ಕ್ಕೇರಿದೆ. (ದಿಗ್ವಿಜಯ ನ್ಯೂಸ್)