24ಗಂಟೆಯಲ್ಲಿ 4000 ಕರೊನಾ​ ಕೇಸ್​ಗಳು; ಇರಲಿ ಎಚ್ಚರ..ಮಿತಿಮೀರುತ್ತಿದೆ ವೈರಸ್​

Covid 19
Published on

ನವದೆಹಲಿ: ಒಂದೆಡೆ ಲಾಕ್​ಡೌನ್​ ಸಡಿಲಿಕೆ, ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುತ್ತಿರುವುದು, ಸಾಮಾನ್ಯ ಜನರ ಸಹಜ ಓಡಾಟ....ಇನ್ನೊಂದೆಡೆ ಸತತವಾಗಿ ಏರಿಕೆಯಾಗುತ್ತಲೇ ಇರುವ ಕರೊನಾ ಸೋಂಕಿನ ಪ್ರಸರಣ.

ದೇಶದಲ್ಲಿ ಕಳೆದ 24ಗಂಟೆಯಲ್ಲಿ ಬರೋಬ್ಬರಿ 4000 ಕರೊನಾ ವೈರಸ್​ ಪ್ರಕರಣಗಳು ಪತ್ತೆಯಾಗಿವೆ. ಈವರೆಗಿನ ಅತಿ ಹೆಚ್ಚು ಸಂಖ್ಯೆ ಇದು.

ಸದ್ಯ ಸೋಂಕಿತರ ಸಂಖ್ಯೆ 67,152ಕ್ಕೆ ಏರಿದ್ದು, ಅದರಲ್ಲಿ ಸಕ್ರಿಯ ಪ್ರಕರಣಗಳು 44,029. ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು 20,916. ಹಾಗೇ ಸಾವಿನ ಸಂಖ್ಯೆ 2,206ಕ್ಕೆ ಏರಿದೆ ಎಂದು ಇಂದು ಬೆಳಗ್ಗೆ ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ ಮೂರನೇ ಹಂತದ ಲಾಕ್​ಡೌನ್ ಜಾರಿಯಲ್ಲಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸಡಿಲಿಕೆ ಆಗಿದ್ದರಿಂದ ಜನರ ಸಂಚಾರವೂ ಸಹಜ ಸ್ಥಿತಿಗೆ ಬರುತ್ತಿದೆ.

ಮೇ 17ರವರೆಗೆ ಲಾಕ್​ಡೌನ್​ ಇದ್ದು, ಅದಾದ ಬಳಿಕ ಮುಂದೇನು ಎಂಬ ಪ್ರಶ್ನೆ ಎದ್ದಿದ್ದು, ಇಂದು ಮಧ್ಯಾಹ್ನ 3ಗಂಟೆಗೆ ಪ್ರಧಾನಿ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸುವ ವಿಡಿಯೋ ಕಾನ್ಫರೆನ್ಸ್​​ ಬಗ್ಗೆ ಇಡೀ ದೇಶ ಕುತೂಹಲದಿಂದ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net