

ಮಂಗಳೂರು: ಹೊನ್ನಾವರದ ತಾಯಿ ಮನೆಯಲ್ಲಿದ್ದ ಮೂರು ತಿಂಗಳ ಮಗುವಿಗೆ ತುರ್ತಾಗಿ ಬೇಕಿದ್ದ ಔಷಧವನ್ನು 180 ಕಿ.ಮೀ ದೂರದ ಮಂಗಳೂರಿನಿಂದ ರಿಲೇ ಮಾದರಿ ಕಾರ್ಯಾಚರಣೆ ನಡೆಸಿ ತಲುಪಿಸುವ ಮೂಲಕ ಕರೊನಾ ವಾರಿಯರ್ಸ್ ತಂಡ ಸಾರ್ಥಕತೆ ಕಂಡಿದೆ. ಮಗುವಿಗೆ ಬೇಕಾದ ಔಷಧ ಮಂಗಳೂರಿನ ತೊಕ್ಕೊಟ್ಟು ಕಲ್ಲಾಪು ನಿವಾಸಿ ರಾಬಿನ್ ಡಿಸೋಜ ಬಳಿ ಇತ್ತು. ಆದರೆ ಲಾಕ್ಡೌನ್ನಿಂದಾಗಿ ಅದನ್ನು ಹೊನ್ನಾವರದಲ್ಲಿದ್ದ ಪತ್ನಿಗೆ ತಲುಪಿಸಲು ಸಾಧ್ಯವಾಗಿರಲಿಲ್ಲ. ಈ ಕಷ್ಟಕ್ಕೆ ದನಿಯಾದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಕ್ಯಾ. ಮಣಿವಣ್ಣನ್ ನೇತೃತ್ವದಲ್ಲಿ ಹುಟ್ಟುಹಾಕಲಾಗಿರುವ ಕೊವಿಡ್ ವಾರಿಯರ್ಸ್ ತಂಡ ಔಷಧವನ್ನು ಮಗುವಿನ ತಾಯಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಏ.17ರಂದು ಆರಂಭವಾದ ಈ ರಿಲೇ ಮಾದರಿ ಕಾರ್ಯಾಚರಣೆ ಮರುದಿನ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಹೇಗಿತ್ತು ಕಾರ್ಯಾಚರಣೆ?
ಏ.16ರಂದು ಬೆಂಗಳೂರಿನ ಡಿಐಪಿಆರ್ ಮುಖ್ಯ ಟೀಂನಿಂದ ಕೊವಿಡ್ ವಾರಿಯರ್ಸ್ ಬಳಗದ ದ.ಕ- ಉಡುಪಿಯ ಪ್ರಧಾನ ಸ್ವಯಂಸೇವಕಿ ಸಹನಾಗೆ ಕರೆ ಬಂದಿತ್ತು. ಔಷಧವನ್ನು ಹೊನ್ನಾವರಕ್ಕೆ ತಲುಪಿಸಬೇಕೆಂಬ ಮಾಹಿತಿ ನೀಡಲಾಯಿತು. ಅವರು ಇನ್ನೋರ್ವ ಸ್ವಯಂಸೇವಕ ಸುದೀಪ್ ಘಾಟೆ ಸಹಿತ ಉಡುಪಿ ಸ್ವಯಂಸೇವಕರ ತಂಡವನ್ನೂ ಅಲರ್ಟ್ ಮಾಡಿದರು. ಮರುದಿನ ಬೆಳಗ್ಗೆ ರಾಬಿನ್ರಿಂದ ಸುದೀಪ್ ಔಷಧ ಕೊಂಡೊಯ್ದು ಸಾಜಿದ್ ಸುಬೇರ್ಗೆ ಹಸ್ತಾಂತರಿಸಿದರು.
ಉಡುಪಿ- ದ.ಕ ಗಡಿ ಹೆಜಮಾಡಿ ಕ್ರಾಸ್ನಿಂದ ಉಡುಪಿ ಟೀಂನ ಸುಕೇತ್ ಕೊಂಡೊಯ್ದು ಉಡುಪಿಯಲ್ಲಿ ಅನೀಶ್ ಎಂಬುವವರಿಗೆ ಹಸ್ತಾಂತರಿಸಿದರು. ಶಿರೂರು ಕ್ರಾಸ್ ತಲುಪಿದಾಗ ಅನೀಶ್ಗೆ ಹೊಸ ಸವಾಲು ಎದುರಾಯಿತು. ಒಮ್ಮೆ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದರೆ ಉಡುಪಿಗೆ ಮರಳುವಂತಿಲ್ಲ ಎಂದು ಪೊಲೀಸರು ಎಚ್ಚರಿಸಿದರು. ಈ ನಡುವೆ ಉಡುಪಿಯ ರೆಡ್ಕ್ರಾಸ್ ಸದಸ್ಯ ನಿತಿನ್ ಶೆಟ್ಟಿ ಅವರನ್ನು ಸಂರ್ಪಸಿದಾಗ ಹೊನ್ನಾವರದ ಆರೋಗ್ಯ ಇಲಾಖೆ ಸಿಬ್ಬಂದಿ ಸಂಪರ್ಕ ಲಭ್ಯವಾಯಿತು. ಅವರು ನೀಡಿದ ಸಲಹೆಯಂತೆ ಔಷಧದ ಕಟ್ಟನ್ನು ಪೊಲೀಸರ ಬಳಿ ನೀಡಿ ಅನೀಶ್ ಉಡುಪಿಗೆ ಮರಳಿದರು. ಮರುದಿನ ಆಗಮಿಸಿದ ಹೊನ್ನಾವರದ ವೈದ್ಯಕೀಯ ಸಿಬ್ಬಂದಿ ಮಹೇಶ್ ನಾಯಕ್ ಭಟ್ಕಳದವರೆಗೆ ಕೊಂಡೊಯ್ದರೆ, ಇನ್ನೋರ್ವ ಸಹಾಯಕ ಯೋಗೇಶ್ ಅದನ್ನು ಹೊನ್ನಾವರದಲ್ಲಿ ಮಗುವಿನ ಕಡೆಯವರಿಗೆ ತಲುಪಿಸಿದರು.
ಹಣ ಮರಳಿಸಿದರು
ವೇಣುವಿನೋದ್ ಕೆ.ಎಸ್