

ಪುದುಚೆರಿ: ಕರೊನಾ ಸೋಂಕಿನ ವಿರುದ್ಧ ಮಾನವ ದೇಹಕ್ಕೆ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪರಿಣಾಮಕಾರಿಯಾದ ಕರೊನಾ ಲಸಿಕೆಗಳನ್ನು ಎಲ್ಲ ನಾಗರೀಕರು ಪಡೆಯುವಂತೆ ಸರ್ಕಾರದ ಪ್ರಯತ್ನ ಸಾಗಿದೆ. ಆದಾಗ್ಯೂ ವಿವಿಧ ಕಾರಣಗಳನ್ನು ಹೇಳಿ ಹಲವರು ಲಸಿಕೆ ಪಡೆಯದೇ ಇರುವುದು ಕಳವಳಕ್ಕೆ ಕಾರಣವಾಗಿದೆ. ಈ ಪರಿಸ್ಥಿತಿಗೆ ಪರಿಹಾರ ಹುಡುಕಲು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.
ಪುದುಚೆರಿಯ ರಾಜ್ಯ ಆರೋಗ್ಯ ಮಿಷನ್ ನಿರ್ದೇಶಕ ಡಾ.ಶ್ರೀರಾಮುಲು ಕೋವಿಡ್19 ಲಸಿಕೆಯನ್ನು ಎಲ್ಲ ವಯಸ್ಕರಿಗೂ ಕಡ್ಡಾಯಗೊಳಿಸಿ ಆಜ್ಞೆ ಹೊರಡಿಸಿದ್ದಾರೆ. ತಕ್ಷಣವೇ ಜಾರಿಗೆ ಬರಲಿರುವ ಈ ನಿರ್ದೇಶನವನ್ನು ಪಾಲಿಸದವರಿಗೆ ಕಾನೂನು ರೀತ್ಯ ಶಿಕ್ಷೆ ವಿಧಿಸುವ ಅವಕಾಶ ಇದೆ ಎಂದಿದ್ದಾರೆ.
“ಪುದುಚೆರಿ ಸಾರ್ವಜನಿಕ ಆರೋಗ್ಯ ಕಾಯ್ದೆ, 1973 ರ ಸೆಕ್ಷನ್ 8 ಮತ್ತು ಸೆಕ್ಷನ್ 54(1) ರಡಿ ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ತಕ್ಷಣದಿಂದ ಕರೊನಾ ಲಸಿಕೀಕರಣವನ್ನು ಕಡ್ಡಾಯಗೊಳಿಸಲಾಗಿದೆ" ಎಂದು ಸರ್ಕಾರದ ಸುತ್ತೋಲೆ ಹೇಳಿದೆ. ಈ ಕಾನೂನು ಉಲ್ಲಂಘಿಸಿದವರಿಗೆ ಯಾವ ಪ್ರಮಾಣದ ಶಿಕ್ಷೆ ವಿಧಿಸಲಾಗುವುದು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ದಿನದಿನಕ್ಕೂ ಹೊಸ ರೂಪಾಂತರಗಳನ್ನು ಹೊಂದಿ ಜಗತ್ತಿನಲ್ಲೇ ತಲ್ಲಣ ಮೂಡಿಸಿರುವ ಕರೊನಾ ವೈರಾಣುವಿನ ಹೆಚ್ಚು ಹರಡಬಲ್ಲ ಹೊಸ ರೂಪಾಂತರವಾದ ಒಮಿಕ್ರಾನ್ ಇದೀಗ ಹೊಸ ಆತಂಕ ಮೂಡಿಸಿದೆ. ಭಾರತದಲ್ಲಿ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರಿಯ ಅಪಾಯವೂ ನಿರಂತರವಾಗಿ ಮುಂದುವರಿದಿದೆ. ಹೀಗಿರುವಾಗ ಲಸಿಕೆ ಪಡೆದು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಿ ಎಂದು ತಜ್ಞರು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)