

ನವದೆಹಲಿ : ಕರೊನಾ ಲಸಿಕಾ ಅಭಿಯಾನದ ಮೂರನೇ ಹಂತ ಇಂದು ಆರಂಭವಾಗಿದ್ದು, 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದಾರೆ. ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳ ಪ್ರತಿಯೊಂದು ದಿನವೂ ಸರ್ಕಾರಿ ಮತ್ತು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು ಎನ್ನಲಾಗಿದೆ.
ಲಸಿಕಾ ಅಭಿಯಾನವು ಏಪ್ರಿಲ್ನಲ್ಲಿ ಸರ್ಕಾರಿ ರಜಾದಿನಗಳನ್ನೂ ಒಳಗೊಂಡಂತೆ ಎಲ್ಲಾ ದಿನಗಳಲ್ಲೂ ನಡೆಯಬೇಕು ಎಂದು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಕರೊನಾ ಸಂಬಂಧಿತ ಸಾವುಗಳು ಶೇ. 90 ರಷ್ಟು 45 ವರ್ಷ ಮೇಲ್ಪಟ್ಟ ಜನರಲ್ಲೇ ಕಂಡುಬಂದಿರುವುದರಿಂದ ಈ ವರ್ಗದ ಜನರು ಸೋಂಕು ಹೊಂದುವ ಅತಿ ಹೆಚ್ಚು ಅಪಾಯವನ್ನು ಹೊಂದಿದ್ದಾರೆ ಎನ್ನಲಾಗಿದೆ.
ಮಾರ್ಚ್ 31 ರ ಬೆಳಿಗ್ಗೆ 9 ಗಂಟೆಯಿಂದ ಏಪ್ರಿಲ್ 1 ರ ಬೆಳಿಗ್ಗೆ 9 ಗಂಟೆವರೆಗಿನ 24 ಗಂಟೆಗಳಲ್ಲಿ ಭಾರತದಲ್ಲಿ 72,330 ಕರೊನಾ ಪ್ರಕರಣಗಳು ವರದಿಯಾಗಿವೆ. 2020ರ ಅಕ್ಟೋಬರ್ನಲ್ಲಿ ಈ ರೀತಿಯ ಏರಿಕೆ ಕಂಡಿದ್ದು, ಇದೀಗ ಮತ್ತೆ ಸೋಂಕು ದರ ಏರಿರುವುದು ಕಳವಳಕ್ಕೆ ಕಾರಣವಾಗಿದೆ. ವರದಿಯಾದ ಪ್ರಕರಣಗಳಲ್ಲಿ 39,544 ಮಹಾರಾಷ್ಟ್ರದಿಂದ ದಾಖಲಾಗಿದ್ದು, ಛತ್ತೀಸಗಡದಿಂದ 4,563 ಮತ್ತು ಕರ್ನಾಟಕದಿಂದ 4,000 ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್)