ಕರೊನಾ 2ನೇ ಅಲೆ, ಹಲವು ರಾಜ್ಯಗಳಲ್ಲಿ ಮತ್ತೆ ನಿರ್ಬಂಧ - ಹರಿಯಾಣ, ರಾಜಸ್ಥಾನದಲ್ಲಿ ಹೊಸ ಪ್ರಕರಣ ಹೆಚ್ಚಳ

Corona virs
Published on

ನವದೆಹಲಿ: ಮಧ್ಯ ಭಾರತ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕರೊನಾ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿದ್ದು, 2ನೇ ಅಲೆಯ ಭೀತಿಯಿಂದಾಗಿ ಹಲವೆಡೆ ಲಾಕ್​ಡೌನ್​ನ ಕೆಲ ನಿರ್ಬಂಧಗಳನ್ನು ಮತ್ತೆ ಜಾರಿ ಮಾಡಲಾಗಿದೆ. ಹರಿಯಾಣ ಮತ್ತು ರಾಜಸ್ಥಾನದಲ್ಲಿ ಶುಕ್ರವಾರ ಈವರೆಗಿನ ಗರಿಷ್ಠ ಮಟ್ಟದ ಹೊಸ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್​ಲಾಲ್ ಕಟ್ಟರ್, ಶಾಲೆಗಳನ್ನು ನ. 30 ರವರೆಗೆ ಮುಚ್ಚುವಂತೆ ಆದೇಶಿಸಿದ್ದಾರೆ. ಮಧ್ಯಪ್ರದೇಶದ 5 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಘೋಷಿಸಲಾಗಿದ್ದು, ಗುಜರಾತ್​ನ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಘೋಷಿಸಲಾಗಿರುವ ರಾತ್ರಿ ಕರ್ಫ್ಯೂವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ರಾಜಸ್ಥಾನದ 33 ಜಿಲ್ಲೆಗಳಲ್ಲಿ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಲಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕೂಡ ಜನರಿಗೆ ಮನೆಯಲ್ಲೇ ಇದ್ದು ಕರೊನಾ ಪಸರಿಸುವಿಕೆ ತಡೆಗಟ್ಟಿ ಎಂದು ಸಲಹೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ನವೆಂಬರ್ 23ರಿಂದ 9ನೇ ತರಗತಿ ಮೇಲ್ಪಟ್ಟ ಶಾಲೆ, ಕಾಲೇಜುಗಳನ್ನು ಪುನರಾರಂಭಿಸುವ ಯೋಜನೆ ಇತ್ತಾದರೂ ಕರೊನಾ ಪ್ರಕರಣಗಳ ಹೆಚ್ಚಳದಿಂದಾಗಿ ಈ ವರ್ಷದ ಅಂತ್ಯದವರೆಗೂ ಅವುಗಳನ್ನು ಪ್ರಾರಂಭಿಸುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ. ಮಧ್ಯಪ್ರದೇಶದ ಭೋಪಾಲ್, ಇಂದೋರ್, ಗ್ವಾಲಿಯರ್, ರತ್ನಂ ಮತ್ತು ವಿದಿಷಾ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದಾರೆ. ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳು ಮುಂದುವರಿಯಲಿವೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ. ದೇಶದಲ್ಲಿ ಸದ್ಯ ಪ್ರತಿದಿನ ಸರಾಸರಿ 45 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಸುಮಾರು 500 ಮಂದಿ ಸಾವನ್ನಪು್ಪತ್ತಿದ್ದಾರೆ. ಕಳೆದೊಂದು ತಿಂಗಳಿಗೆ ಹೋಲಿಸಿದರೆ ಸದ್ಯದ ಪ್ರತಿದಿನದ ಪ್ರಕರಣಗಲ್ಲಿ ಇಳಿಕೆ ಕಂಡು ಬಂದಿದೆ. ಆದರೆ ಅಮೆರಿಕ ಸೇರಿ ಯುರೋಪ್​ನ ಕೆಲ ರಾಷ್ಟ್ರಗಳಲ್ಲಿ ಕರೊನಾ ಮತ್ತೆ ಉಲ್ಬಣಗೊಂಡಿರುವುದರಿಂದ ಭಾರತದಲ್ಲೂ ಎರಡನೇ ಅಲೆ ಏಳಬಹುದು ಎಂಬ ಭೀತಿ ಎದುರಾಗಿದೆ.

ಲಸಿಕೆ ವಿತರಣೆಗೆ ಆಪ್

ಕೇಂದ್ರ ಸರ್ಕಾರ ಇತ್ತೀಚೆಗೆ ಅಭಿವೃದ್ಧಿಪಡಿಸಿರುವ ಕೋವಿನ್ ಆಪ್ ದೇಶದಲ್ಲಿನ ಕರೊನಾ ಲಸಿಕೆ ವಿತರಣೆಯ ಎಲ್ಲ ಹಂತಗಳನ್ನು ಟ್ರ್ಯಾಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಲಸಿಕೆಯ ವಿತರಣೆ, ಸರಬರಾಜು, ಸಂಗ್ರಹಣೆ ಸೇರಿದಂತೆ ಅನೇಕ ಮಾಹಿತಿಗಳನ್ನು ಇದರ ಮೂಲಕ ಪಡೆಯಬಹುದಾಗಿದೆ. ಜತೆಗೆ ಲಸಿಕೆಯನ್ನು ಮೊದಲು ಪಡೆಯುವ ಗುಂಪು ಯಾವುದು ಹಾಗೂ ಅವರಿಗೆ ಯಾವಾಗ ಲಸಿಕೆ ನೀಡಲಾಗುತ್ತದೆ ಎಂಬ ಮಾಹಿತಿಗಳನ್ನೂ ಒಳಗೊಂಡಿರುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಆರೋಗ್ಯ ಸಚಿವಾಲಯ ಮತ್ತು ಆಯುಷ್ಮಾನ್ ಭಾರತ್ ನಂತಹ ಏಜೆನ್ಸಿಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸಲಿವೆ. ರಾಜ್ಯ ಹಾಗೂ ಮತ್ತು ಕೇಂದ್ರದ ದತ್ತಾಂಶಗಳನ್ನು ಕೋವಿನ್ ಆಪ್ ಹೊಂದಿರಲಿದೆ. ಅಲ್ಲದೇ ದೇಶಾದ್ಯಂತ ಗುರುತಿಸಲಾಗಿರುವ ಸುಮಾರು 28 ಸಾವಿರ ಕೋಲ್ಡ್ ಸ್ಟೋರೇಜ್ ಘಟಕಗಳಲ್ಲಿನ ಲಸಿಕೆಯ ದಾಸ್ತಾನು ಪ್ರಮಾಣವನ್ನೂ ಸಹ ಆಪ್ ಮೂಲಕ ಪಡೆಯಬಹುದಾಗಿದೆ. ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದ ಬಳಿಕ ನೋಂದಾಯಿಸಿಕೊಂಡಿರುವವರಿಗೆ ಆನ್​ಲೈನ್ ಮೂಲಕ ಪ್ರಮಾಣಪತ್ರವನ್ನೂ ನೀಡಲಾಗುತ್ತದೆ.

ಸಂಭಾವ್ಯ ಚಿಕಿತ್ಸೆ

ಕರೊನಾ ಸೋಂಕಿತರಲ್ಲಿ ಉಂಟಾಗುವ ಉರಿಯೂತ, ಶ್ವಾಸಕೋಶದ ಹಾನಿ ಮತ್ತು ಅಂಗಾಂಗ ವೈಫಲ್ಯವನ್ನು ತಡೆಗಟ್ಟುವ ಸಂಭಾವ್ಯ ಚಿಕಿತ್ಸೆಯೊಂದನ್ನು ಭಾರತ ಮೂಲದ ಅಮೆರಿಕನ್ ವೈದ್ಯರೊಬ್ಬರು ಕಂಡು ಹಿಡಿದಿದ್ದಾರೆ. ಟೆನ್ಸೆಸ್ಸೀಯ ಸೇಂಟ್ ಜೂಡ್ ಚಿಲ್ಡ ್ರ್ ರಿಸರ್ಚ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಸಂಶೋಧಕಿ ಡಾ. ತಿರುಮಲಾದೇವಿ ಕಣ್ಣೇಂಗಂಟಿ ಅವರ ಸಂಶೋಧನಾ ವರದಿ ಸೆಲ್ ಜರ್ನಲ್​ನಲ್ಲಿ ಪ್ರಕಟವಾಗಿದೆ. ಸೋಂಕಿತರಲ್ಲಿ ಉಂಟಾಗುವ ಸಮಸ್ಯೆಗಳ ವಿರುದ್ಧ ಕೆಲಸ ಮಾಡಬಲ್ಲ ರೋಗನಿರೋಧಕ ಪ್ರತಿಕ್ರಿಯೆಯ ಔಷಧಗಳನ್ನು ಅವರು ಗುರುತಿಸಿದ್ದಾರೆ. ತೆಲಂಗಾಣ ಮೂಲದ ತಿರುಮಲಾದೇವಿ 2007ರಿಂದ ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net