

ಬೆಂಗಳೂರು: ಮಹಾಮಾರಿ ಕರೊನಾ ಅಟ್ಟಹಾಸ ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಇದೆ. ಈಗಾಗಲೇ ಸಾಕಷ್ಟು ಸಾವು-ನೋವನ್ನು ತಂದೊಡ್ಡಿರುವ ಈ ಸೋಂಕು ಜನಸಾಮಾನ್ಯರು, ಗಣ್ಯರು, ರಾಜಕಾರಣಿಗಳಾದಿಯಾಗಿ ಎಲ್ಲರನ್ನೂ ಬೆಂಬಿಡದೆ ಕಾಡುತ್ತಿದೆ. ಇದೀಗ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸರದಿ.
ಸಚಿವ ಮಾಧುಸ್ವಾಮಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಭಾನುವಾರಷ್ಟೇ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ಗೂ ಕರೊನಾ ಟೆಸ್ಟ್ ವರದಿ ಪಾಸಿಟಿವ್ ಬಂದಿದ್ದರಿಂದ ಅವರು ಹೋಂ ಐಸೋಲೇಶನ್ಗೆ ಒಳಪಟ್ಟಿದ್ದಾರೆ. ಕಾಂಗ್ರೆಸ್ನ ಹಿರಿಯ ಶಾಸಕ ಎಚ್.ಕೆ. ಪಾಟೀಲ್ ಕೂಡ, 'ನನಗೆ ಕರೊನಾ ತಗುಲಿದೆ' ಎಂದು ಸೋಮವಾರ ಬೆಳಗ್ಗೆ ಟ್ವೀಟ್ ಮೂಲಕ ತಿಳಿಸಿದ್ದರು. ಸದ್ಯ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ಆಡಳಿತ ಪಕ್ಷದ ಸಚಿವ ಮಾಧುಸ್ವಾಮಿಗೂ ಕೋವಿಡ್ ಸೋಂಕು ತಗುಲಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿರಿ ಕಗ್ಗತ್ತಲ ರಾತ್ರಿಯಲ್ಲಿ ಸದ್ದು ಮಾಡಿ ಸಿಕ್ಕಿಬಿದ್ದ ಕಳ್ಳರು!
ಇತ್ತೀಚಿಗೆ ಸಚಿವ ಮಾಧುಸ್ವಾಮಿ ಅವರ ಕಾರು ಚಾಲಕನಿಗೆ ಕರೊನಾ ಸೋಂಕು ತಗುಲಿತ್ತು. ಬಳಿಕ ಬೆಂಗಳೂರಿನ ಸಚಿವರ ಅಧಿಕೃತ ನಿವಾಸದ ಅಡುಗೆ ಸಿಬ್ಬಂದಿಗೂ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೆಸಿಎಂ ಶನಿವಾರ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು.
ಶನಿವಾರ ಅಧಿವೇಶನದಲ್ಲಿ ಭಾಗವಹಿಸಿ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ಸಚಿವರು ಭಾನುವಾರ ಬೆಳಗ್ಗೆ 11.30ಕ್ಕೆ ಜೆ.ಸಿ.ಪುರದ ನಿವಾಸಕ್ಕೆ ಮರಳಿದ್ದರು. ಅಷ್ಟರಲ್ಲಿ ಮೊಬೈಲ್‌ಗೆ ಕೋವಿಡ್ ಪರೀಕ್ಷೆ ವರದಿ ಬಂದಿದ್ದು, ಯಾವುದೇ ರೋಗಲಕ್ಷಣ ಇಲ್ಲದಿದ್ದರೂ ಸೋಂಕು ದೃಢಪಟ್ಟಿದೆ. ತಕ್ಷಣವೇ ಬೆಂಗಳೂರಿನ ಹಳೇ ವಿಮಾನನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.