ವಿದ್ಯುತ್ ಪೂರೈಕೆಯಿಲ್ಲದೆ ಆಕ್ಸಿಜನ್​ ಸ್ಥಗಿತ : ಕರೊನಾ ರೋಗಿ ಸಾವು

suresh
Published on

ದೇವನಹಳ್ಳಿ : ಸರ್ಕಾರಿ ಕೋವಿಡ್​ ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಯಿಲ್ಲದೆ ಆಕ್ಸಿಜನ್ ಸ್ಥಗಿತಗೊಂಡು ಕರೊನಾ ರೋಗಿಗಳು ನರಳಾಟ ಅನುಭವಿಸಿದ್ದು, ಓರ್ವ ಮೃತಪಟ್ಟಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಸರ್ಕಾರಿ ಕೋವಿಡ್​ ಆಸ್ಪತ್ರೆಯಲ್ಲಿ ಸಂಭವಿಸಿರುವ ಈ ಸಾವಿಗೆ ಆಸ್ಪತ್ರೆಯ ಮೈಂಟೇನೆನ್ಸ್​​ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಇಂದು‌ ಬೆಳಗ್ಗೆ 11 ಗಂಟೆ ಸುಮಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ಕರೆಂಟ್ ಕಟ್​ ಆಯಿತು. ಆದರೆ ಕರೆಂಟ್​ ಹೋದರೂ ಆಸ್ಪತ್ರೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಜನರೇಟರ್ ಆನ್ ಮಾಡದೆ ನಿರ್ಲಕ್ಷ್ಯ ವಹಿಸಿದರು. ಅರ್ಧ ಗಂಟೆ ಕರೆಂಟ್ ಬಾರದ ಹಿನ್ನೆಲೆಯಲ್ಲಿ ಆಕ್ಸಿಜನ್ ಮೇಲೆ ಅವಲಂಬಿತರಾಗಿರುವ ರೋಗಿಗಳ ನರಳಾಟ ಶುರುವಾಯಿತು. ಈ ವೇಳೆ ಮಾಲೂರು ಮೂಲದ ಕರಿನಾಯಕನಹಳ್ಳಿ ಗ್ರಾಮದ ಸುರೇಶ್(33) ಆಕ್ಸಿಜನ್ ಸಿಗದೆ ಸಾವಪ್ಪಿದರು.

ಆಸ್ಪತ್ರೆಯ ಬಳಿ ಮೃತನ ಕುಟುಂಬಸ್ಥರ ಆಕ್ರಂದನ ಗಗನ ಮುಟ್ಟಿದೆ. ಕರೆಂಟ್​ ಕಟ್​​​ ಆದ ತಕ್ಷಣ ಜನರೇಟರ್ ಹಾಕದೆ ಸಾವಿಗೆ ಕಾರಣರಾದ ಆಸ್ಪತ್ರೆ ಸಿಬ್ಬಂದಿ ವಿರುದ್ದ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net