ಇಳಿಯುತ್ತಿದೆ ಕರೊನಾ ಸೋಂಕು : 1.2 ಲಕ್ಷ ಹೊಸ ಪ್ರಕರಣಗಳು

coronaindia
Published on

ನವದೆಹಲಿ : ಭಾರತದಲ್ಲಿ ಕರೊನಾ ಎರಡನೇ ಅಲೆಯು ತಗ್ಗುತ್ತಿರುವ ಸೂಚನೆಗಳು ಕಂಡುಬಂದಿವೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1.20 ಲಕ್ಷ ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಕಳೆದ 58 ದಿನಗಳಲ್ಲಿ ಇದು ಅತಿಕಡಿಮೆ ನಿತ್ಯಪ್ರಕರಣಗಳ ಸಂಖ್ಯೆಯಾಗಿದೆ. ಜೊತೆಗೆ 12 ದಿನಗಳಿಂದ ಪಾಸಿಟಿವ್ ದರವು ಶೇ.10 ರ ಕೆಳಗೇ ಇದೆ. ದೇಶದ 377 ಜಿಲ್ಲೆಗಳಲ್ಲಿ ಪ್ರಸ್ತುತ ಶೇ. 5 ಕ್ಕಿಂತ ಕಡಿಮೆ ಪಾಸಿಟಿವಿ ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಆದಾಗ್ಯೂ, ಅಮೆರಿಕದ ನಂತರ ಕರೊನಾದಿಂದ ಅತಿಹೆಚ್ಚು ಬಾಧಿತವಾದ ದೇಶ ಭಾರತವೇ ಆಗಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ ಈವರೆಗೆ ದೇಶದಲ್ಲಿ 2.86 ಕೋಟಿಗೂ ಹೆಚ್ಚು ಕರೊನಾ ಪ್ರಕರಣಗಳು ವರದಿಯಾಗಿವೆ. ಹಾಲಿ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 15.55 ಲಕ್ಷಕ್ಕೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ 3,380 ಕರೊನಾ ಸಾವುಗಳು ದಾಖಲಾಗಿವೆ.

ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಉತ್ತರಪ್ರದೇಶಗಳಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಕಂಡುಬಂದಿವೆ. ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 16,068 ಹೊಸ ಪ್ರಕರಣಗಳು ದಾಖಲಾಗಿದ್ದು, 2.80 ಲಕ್ಷ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ವಿಧಿಸಲಾಗಿರುವ ಲಾಕ್​ಡೌನ್​ಅನ್ನು ಜೂನ್​ 14 ರವರೆಗೆ ವಿಸ್ತರಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net