

ಬೆಂಗಳೂರು:ಕರೊನಾ ಸೋಂಕಿಗೆ ಕಡಿವಾಣ ಹಾಕುವ ಸಲುವಾಗಿ ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್ಡೌನ್ ಮಾಡುತ್ತಿದೆ. ಆದರೆ, ಇದರಿಂದ ಈವರೆಗೆ ಸೋಂಕಿನ ಲಕ್ಷಣಗಳೂ ಇಲ್ಲದ ಹಳ್ಳಿಗಳಲ್ಲೂ ಕರೊನಾ ಕಾಣಿಸಿಕೊಳ್ಳುವ ಭೀತಿ ಎದುರಾಗುವಂತಾಗಿದೆ.
ರಾತ್ರಿ ಕರ್ಫ್ಯೂ, ಭಾನುವಾರದ ಲಾಕ್ಡೌನ್ ಹೀಗೆ ನಾನಾ ಕಸರತ್ತು ಮಾಡಿದರೂ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಅದರಲ್ಲೂ ಬೆಂಗಳೂರು ನಗರದಲ್ಲಿ ನಿತ್ಯ 1 ಸಾವಿರಕ್ಕೂ ಹೆಚ್ಚಿನ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಸೋಂಕಿನ ಕೊಂಡಿ ತಪ್ಪಿಸಲು ಜು. 14ರ ರಾತ್ರಿ 8ರಿಂದ ಜು. 22ರ ಬೆಳಗ್ಗೆ 5ರವರೆಗೆ ಬೆಂಗಳೂರು ನಗರ ಮತ್ತು ಬೆಂ. ಗ್ರಾಮಾಂತರ ಜಿಲ್ಲೆಗಳನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಬೇರೆ ಜಿಲ್ಲೆಯವರು ತಮ್ಮ ಊರುಗಳತ್ತ ತೆರಳಲು ಮುಂದಾಗುವಂತಾಗಿದೆ.
ಈ ಹಿಂದೆ ಭಾನುವಾರದ ಲಾಕ್ಡೌನ್ ಘೋಷಿಸಿದಾಗಲೇ ಲಕ್ಷಾಂತರ ಜನರು ತಮ್ಮ ಊರುಗಳತ್ತ ತೆರಳಿದ್ದಾರೆ. ಇದೀಗ ಒಂದು ವಾರ ಲಾಕ್ಡೌನ್ ಮಾಡುತ್ತಿರುವುದರಿಂದ ಮಂಗಳವಾರ ಸಂಜೆಯೊಳಗೆ ಇನ್ನಷ್ಟು ಜನರು ಊರುಗಳಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೆ 20 ಲಕ್ಷಕ್ಕೂ ಹೆಚ್ಚಿನ ಜನರು ಬೆಂಗಳೂರು ತೊರೆದಿದ್ದಾರೆ. ಅದರಲ್ಲಿ ವಲಸೆ ಕಾರ್ವಿುಕರೇ ಹೆಚ್ಚಿದ್ದಾರೆ. ಈಗ ತೆರಳುವವರು ಕೆಲಸಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಮನೆ ಖಾಲಿ ಮಾಡಿಕೊಂಡು ನಗರ ಬಿಡುತ್ತಿರು ವುದರಿಂದ ಭಾನುವಾರ ಸಂಜೆಯಿಂದಲೇ ನಗರದ ಸುತ್ತಲಿನ ಟೋಲ್ಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚುವಂತಾಗಿದೆ.
ಬೆಂಗಳೂರಲ್ಲೇ ಸೋಂಕಿತರ ಪ್ರಮಾಣ ಶೇ. 40: ರಾಜ್ಯದಲ್ಲಿನ 36 ಸಾವಿರ ಸೋಂಕಿತರ ಪೈಕಿ ಶೇ. 40 ಸೋಂಕಿತರು, ಅಂದರೆ 16,862 (ಜು. 11ರವರೆಗೆ) ಮಂದಿ ಬೆಂಗಳೂರು ನಗರದಲ್ಲಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಸೋಂಕು ಈಗಾಗಲೆ ಸಮುದಾಯಕ್ಕೆ ಹಬ್ಬಿದೆ ಎಂಬ ಮಾತುಗಳಿವೆ.
ಅಂತರ ಜಿಲ್ಲೆ ಸಂಚಾರಕ್ಕೆ ತಡೆ: ಲಾಕ್ಡೌನ್ ಅವಧಿಯಲ್ಲಿ ಬೆಂಗಳೂರಿನಿಂದ ಬೇರೆ ಕಡೆಗೆ ತೆರಳುವವರು ಹಾಗೂ ಬೇರೆ ಊರುಗಳಿಂದ ಬೆಂಗಳೂರಿಗೆ ಬರುವುದಕ್ಕೂ ತಡೆ ಹಾಕಬೇಕಿದೆ. ಅಂತರಜಿಲ್ಲೆ ಸಂಚಾರಕ್ಕೆ ತಡೆಯೊಡ್ಡಿದರೆ ಮಾತ್ರ ಬೆಂಗಳೂರಿನಿಂದ ಹೊರಗೆ ಹೋಗುವವರನ್ನು ತಡೆಯಬಹುದು. ಟೋಲ್ಪ್ಲಾಜಾ, ನಗರದ ಗಡಿಯಲ್ಲಿ ಚೆಕ್ಪೋಸ್ಟ್ ಹಾಕಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.
ಮುನ್ನೆಚ್ಚರಿಕೆ ಅತ್ಯವಶ್ಯ: ಊರುಗಳತ್ತ ತೆರಳಲು ನಗರವನ್ನು ತೊರೆಯುತ್ತಿ ರುವ ಜನರನ್ನು ತಡೆಯಲು ಸರ್ಕಾರದಿಂದ ಸಾಧ್ಯ ವಿಲ್ಲ ಎಂದು ಬಹುತೇಕ ಸಚಿವರು ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರಿನಿಂದ ತಮ್ಮ ಜಿಲ್ಲೆಗಳಿಗೆ ಬರುವ ಜನರನ್ನು ತಪಾಸಣೆಗೊಳಪಡಿಸುವುದಕ್ಕೆ ಆಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಜತೆಗೆ ರೋಗಲಕ್ಷಣ ಇರುವವರನ್ನು ಪತ್ತೆ ಹಚ್ಚಿ ಅವರ ಗಂಟಲದ್ರವದ ಮಾದರಿ ಪರೀಕ್ಷೆಗೊಳಪಡಿಸಬೇಕು. ಹಾಗೇ, ಜಿಲ್ಲೆಗೆ ಪ್ರವೇಶಿಸುವ ಪ್ರತಿಯೊಬ್ಬರನ್ನೂ ಕ್ವಾರಂಟೈನ್ಗೆ ಒಳಪಡಿಸಬೇಕಿದೆ. ಜತೆಗೆ, ಅವರು ನಿಗದಿತ ಅವಧಿವರೆಗೆ ಹೊರಬರದಂತೆ ತೀವ್ರ ನಿಗಾ ವಹಿಸಬೇಕಿದೆ. ಅಲ್ಲದೆ ಇನ್ನಷ್ಟು ಅಗತ್ಯ ಕ್ರಮ ಕೈಗೊಳ್ಳಬೇಕಿದ್ದು, ಅದಾಗದಿದ್ದರೆ ರಾಜ್ಯದ ಪ್ರತಿ ಮೂಲೆಗಳಲ್ಲೂ ಸೋಂಕಿತರು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಬೆಂಗಳೂರಿನಲ್ಲಿ ಸಮುದಾಯಕ್ಕೆ ಸೋಂಕು: ಸಿಲಿಕಾನ್ ಸಿಟಿ ಕರೊನಾ ಸೋಂಕಿನ ಹಾಟ್ಸ್ಪಾಟ್ ಆಗಿದ್ದು, ಜುಲೈನಲ್ಲಿ ಕಂಡುಬಂದ 12,307 ಕೋವಿಟ್ ಪಾಸಿಟಿವ್ ಪ್ರಕರಣಗಳಲ್ಲಿ ಶೇ.99 ಜನರಿಗೆ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಇಷ್ಟೊಂದು ಜನರಿಗೆ ಮೂಲ ಸಿಗದಿರುವ ಹಿನ್ನೆಲೆಯಲ್ಲಿ ಶೇ.100 ಸಮುದಾಯಕ್ಕೆ ಸೋಂಕು ಖಚಿತವಾಗಿರುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗುತ್ತಿವೆ. ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಇನ್ನಷ್ಟು ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಒಂದು ವಾರದ ಲಾಕ್ಡೌನ್ ಘೊಷಣೆ ಮಾಡಲಾಗಿದೆ. ರಾಜ್ಯದಲ್ಲೆಲ್ಲ ಕರೊನಾ ಅಬ್ಬರಿಸುತ್ತಿದ್ದರೂ, ರಾಜಧಾನಿಯಲ್ಲಿ ಅದರ ತೀವ್ರತೆ ಹೆಚ್ಚಾಗಿದೆ.