ಭಾರತೀಯ ಕ್ರೀಡೆಗೂ ಕೊರೊನಾ ಪೆಟ್ಟು

shooting mar 20
Published on

ನವದೆಹಲಿ: ಜಾಗತಿಕ ಮಟ್ಟದಲ್ಲಿ ತನ್ನ ಹಾವಳಿ ಎಬ್ಬಿಸಿರುವ ಕೊರೊನಾ ವೈರಸ್​ನಿಂದ ಕ್ರೀಡಾ ಜಗತ್ತು ನಲುಗಿ ಹೋಗಿದೆ. ಅದರಲ್ಲೂ ಭಾರತದ ಟೋಕಿಯೊ ಒಲಿಂಪಿಕ್ ಸಿದ್ಧತೆಗೆಕೊರೊನಾ ವೈರಸ್ ಅತಿಯಾಗಿ ಅಡ್ಡಿ ಮಾಡಿದೆ. ನವದೆಹಲಿಯಲ್ಲಿ ಮಾರ್ಚ್ 15ರಿಂದ 25ರವರೆಗೆ ನಡೆಯಬೇಕಿದ್ದ ಶೂಟಿಂಗ್ ವಿಶ್ವಕಪ್​ಅನ್ನು ವೈರಸ್ ಕಾರಣದಿಂದಾಗಿ ಮುಂದೂಡಿಕೆ ಮಾಡಲಾಗಿದ್ದರೆ, ಟೋಕಿಯೊದಲ್ಲಿ ನಡೆಯಬೇಕಿದ್ದ ಒಲಿಂಪಿಕ್ ಟೆಸ್ಟ್ ಇವೆಂಟ್​ಗಳನ್ನು ಕೂಡ ರದ್ದು ಮಾಡಲಾಗಿದೆ.

ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡೆಗಳ ಒಕ್ಕೂಟ (ಐಎಸ್​ಎಸ್​ಎಫ್) ಮಾನ್ಯತೆ ನೀಡಿದ್ದ ವಿಶ್ವಕಪ್​ನಲ್ಲಿ ಶೂಟಿಂಗ್​ನ ಎಲ್ಲ ಮಾದರಿಯ ಸ್ಪರ್ಧೆಗಳು ನಡೆಯಬೇಕಿದ್ದವು. ಇದಕ್ಕಾಗಿ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್​ನಲ್ಲಿ ಸಿದ್ಧತೆ ಕೂಡ ನಡೆಯುತ್ತಿದ್ದವು. ಇನ್ನು ಒಲಿಂಪಿಕ್ ಟೆಸ್ಟ್ ಇವೆಂಟ್ ಏಪ್ರಿಲ್ 16ರಂದು ನಡೆಯಬೇಕಿತ್ತು.

‘ದೆಹಲಿಯಲ್ಲಿ ನಡೆಯಬೇಕಿದ್ದ ಟೂರ್ನಿ ಒಲಿಂಪಿಕ್ಸ್ ಗೇಮ್ಸ್​ಗಿಂತ ಮುಂಚಿತವಾಗಿ ಎರಡು ಭಾಗಗಳಲ್ಲಿ ನಡೆಯಲಿದೆ. ಇದರ ದಿನಾಂಕಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು’ ಎಂದು ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್​ಆರ್​ಎಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರೊನಾ ವೈರಸ್ ವ್ಯಾಪಕವಾಗಿರುವ ದೇಶಗಳಾದ ಚೀನಾ, ಇಟಲಿ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಇರಾನ್​ನ ಪ್ರವಾಸಿಗರು ಭಾರತಕ್ಕೆ ಬರಲು ಕೇಂದ್ರ ಸರ್ಕಾರ ಹಲವಾರು ನಿಯಮಗಳನ್ನು ವಿಧಿಸಿದ್ದ ಕಾರಣದಿಂದಾಗಿ ವಿಶ್ವಕಪ್​ಅನ್ನು ಮುಂದೂಡಲು ತೀರ್ವನಿಸಲಾಗಿದೆ. ಒಟ್ಟಾರೆ 22 ದೇಶಗಳು ಈ ಟೂರ್ನಿಯಿಂದ ಹಿಂದೆ ಸರಿದಿದ್ದವು. ಇದು ಗುರುವಾರ ರಾತ್ರಿವರೆಗಿನ ಮಾಹಿತಿ. ಇನ್ನೂ ಕೆಲ ದೇಶಗಳು ಹಿಂದೆ ಸರಿಯುವ ಹಾದಿಯಲ್ಲಿವೆ ಎಂದು ಎನ್​ಆರ್​ಎಐ ಮಾಹಿತಿ ನೀಡಿದೆ. ವೈರಸ್ ವ್ಯಾಪಕವಾದ ದೇಶಗಳ ಪ್ರವಾಸಿಗರಿಗೆ 2020ರಲ್ಲಿ ನೀಡಲಾದ ಹಾಗೂ ಈವರೆಗೆ ಭಾರತಕ್ಕೆ ಆಗಮಿಸಿದ ಈ ಪ್ರವಾಸಿಗರ ವೀಸಾವನ್ನು ತಕ್ಷಣದಿಂದಲೇ ಭಾರತ ರದ್ದು ಮಾಡಿದೆ. ಅದಲ್ಲದೆ, ಐಎಸ್​ಎಸ್​ಎಫ್ ಕೂಡ ಭಾರತದ ಆತಿಥ್ಯದ ಶೂಟಿಂಗ್ ವಿಶ್ವಕಪ್​ನಲ್ಲಿ ಯಾವುದೇ ರ‍್ಯಾಂಕಿಂಗ್ ಅಂಕ ನೀಡಲಾಗುವುದಿಲ್ಲ ಎಂದು ಘೋಷಣೆ ಮಾಡಿತ್ತು. ಇದೇ ಕಾರಣಕ್ಕಾಗಿ ಕಳೆದ ವಾರ ಸೈಪ್ರಸ್​ನಲ್ಲಿ ನಡೆದ ಐಎಸ್​ಎಸ್​ಎಫ್ ಶೂಟಿಂಗ್ ವಿಶ್ವಕಪ್​ನಿಂದ ಭಾರತ ಹಿಂದೆ ಸರಿದಿತ್ತು. ಮಾರ್ಚ್ 11ರಿಂದ ನಡೆಯಲಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಕ್ಲಬ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಭಾರತ ಹಿಂದೆ ಸರಿದಿರುವುದರಿಂದ ಷಟ್ಲರ್​ಗಳು ಒಲಿಂಪಿಕ್ಸ್ ಸಿದ್ಧತೆಗೆ ದೊಡ್ಡ ಹೊಡೆತ ಬಿದ್ದಿದೆ. ಈ ತಿಂಗಳು ಬೆಂಗಳೂರಿನಲ್ಲಿ ನಡೆಯಬೇಕಿದ್ದ 3/3 ಬಾಸ್ಕೆಟ್​ಬಾಲ್ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಕೂಟವೂ ರದ್ದುಗೊಂಡಿತ್ತು.

ಟಿ20 ಟೂರ್ನಿ ರದ್ದು ಮಾಡಿದ ನೇಪಾಳ

ಕ್ರಿಸ್ ಗೇಲ್ ಸೇರಿದಂತೆ ವಿಂಡೀಸ್​ನ ಪ್ರಮುಖ ತಾರೆಯರನ್ನು ಒಳಗೊಂಡಿದ್ದ ನೇಪಾಳದ ಟಿ20 ಟೂರ್ನಿ, ವೈರಸ್​ನ ಕಾರಣದಿಂದಾಗಿ ರದ್ದಾಗಿದೆ. ಎವರೆಸ್ಟ್ ಪ್ರೀಮಿಯರ್ ಲೀಗ್ ಮಾರ್ಚ್ 14 ರಂದು ಆರಂಭವಾಗಬೇಕಿತ್ತು. ಆದರೆ, ವೈರಸ್​ನಿಂದಾಗಿ ಇದನ್ನು ರದ್ದು ಮಾಡಲಾಗಿದ್ದು, ಸಮಯ ಅನುವು ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ನಡೆಸುವುದಾಗಿ ನೇಪಾಳ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.

ಹ್ಯಾಂಡ್​ಶೇಕ್ ಇಲ್ಲ

ಲಂಡನ್: ಕರೊನಾ ವೈರಸ್ ಹಬ್ಬುವುದನ್ನು ತಡೆಯುವ ಸಲುವಾಗಿ ಇಂಗ್ಲೀಷ್ ಪ್ರೀಮಿಯರ್ ಲೀಗ್ ಫುಟ್​ಬಾಲ್ ಟೂರ್ನಿ ಯಲ್ಲಿ ಆಟಗಾರರು ಹಾಗೂ ಅಧಿಕಾರಿಗಳ ಹ್ಯಾಂಡ್​ಶೇಕ್​ಅನ್ನು ರದ್ದು ಮಾಡಿದೆ. ಮುಂದಿನ ಸೂಚನೆ ನೀಡುವವರೆಗೂ ಅಧಿಕಾರಿಗಳು ಹಾಗೂ ಆಟಗಾರರು ಪಂದ್ಯದ ವೇಳೆ ಸಾಂಪ್ರದಾಯಿಕ ಹ್ಯಾಂಡ್​ಶೇಕ್ ಮಾಡುವಂತಿಲ್ಲ ಎಂದು ಇಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಫ್ರೆಂಚ್ ಲೀಗ್ ಕೂಡ ಇದೇ ಪದ್ಧತಿಯನ್ನು ಅನುಸರಿಸಿದೆ. ಪ್ರಸ್ತುತ ಇಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಲಿವರ್​ಪೂಲ್, ಪಂದ್ಯಕ್ಕೂ ಮುನ್ನ ಮಕ್ಕಳ ಕೈಹಿಡಿದು ಮೈದಾನಕ್ಕೆ ಬರುವುದಿಲ್ಲ ಎಂದು ಹೇಳಿದೆ.

ಖಾಲಿ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಇವೆಂಟ್

ಟೋಕಿಯೋ: ವೈರಸ್ ತೀವ್ರಗತಿಯಲ್ಲಿ ಪಸರಿಸುತ್ತಿರುವ ನಡುವೆಯೂ ಶುಕ್ರವಾರ ಟೋಕಿಯೋದಲ್ಲಿ ಸ್ಪೋರ್ಟ್ಸ್ ಕ್ಲೈಂಬಿಂಗ್ ವಿಭಾಗದ ಒಲಿಂಪಿಕ್ ಟೆಸ್ಟ್ ಇವೆಂಟ್ ನಡೆದಿದೆ. ಆದರೆ, ಯಾವುದೇ ಅಭಿಮಾನಿಗಳು ಹಾಗೂ ಅಗ್ರ ಅಥ್ಲೀಟ್​ಗಳು ಸ್ಪರ್ಧೆ ಮಾಡಿರಲಿಲ್ಲ. ಕ್ಲೈಂಬಿಂಗ್ ವ್ಯವಸ್ಥೆಯನ್ನು ಪರಿಶೀಲನೆ ಮಾಡುವ ಸಲುವಾಗಿ ಅಮೆಚೂರ್ ಅಥ್ಲೀಟ್​ಗಳನ್ನು ಬಳಸಿಕೊಂಡರು. ಜಪಾನ್​ನಲ್ಲಿ ಬಹುತೇಕ ಎಲ್ಲ ದೊಡ್ಡ ಮಟ್ಟದ ಕ್ರೀಡಾಕೂಟಗಳು ಹಾಗೂ ದೊಡ್ಡ ಸಾರ್ವಜನಿಕ ಸಮಾರಂಭಗಳನ್ನು ನಡೆಸಲಾಗುತ್ತಿಲ್ಲ. ಬೇಸ್​ಬಾಲ್​ನ ಪೂರ್ವಭಾವಿ ಪಂದ್ಯಗಳೂ ಕೂಡ ಅಭಿಮಾನಿಗಳಿಲ್ಲದೆ ನಡೆದಿತ್ತು. ಮಾರ್ಚ್ 18ರವರೆಗೆ ಜೆ-ಲೀಗ್ ಸಾಕರ್ ಮುಂದೂಡಿಕೆಯಾಗಿದೆ. ಸ್ಪಿ್ರಗ್ ಸುಮೋ ಸ್ಪರ್ಧೆ ಕೂಡ ಖಾಲಿ ಮೈದಾನದಲ್ಲಿ ನಡೆಯುತ್ತಿವೆ. ಇಡೀ ದೇಶದಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಆದರೆ, ಸ್ಥಳೀಯ ಸಂಘಟನಾ ಸಮಿತಿ ಮಾತ್ರ ಜುಲೈ 24ರಂದು ಒಲಿಂಪಿಕ್ಸ್ ಹಾಗೂ ಆಗಸ್ಟ್ 25 ರಂದು ಪ್ಯಾರಾಲಿಂಪಿಕ್ಸ್ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಜಪಾನ್​ನ ವೈರಾಲಾಜಿಸ್ಟ್​ಗಳು ಒಲಿಂಪಿಕ್ಸ್ ನಡೆಯುವ ಸಾಧ್ಯತೆಯನ್ನು ಈ ಹಂತದಲ್ಲಿ ಹೇಳುವುದು ಕಷ್ಟ ಎಂದಿದ್ದಾರೆ.

ದಕ್ಷಿಣ ಕೊರಿಯಾ ಒಲಿಂಪಿಕ್ಸ್ ಸ್ಪರ್ಧೆ ಅನುಮಾನ

ಸಿಯೋಲ್: ಚೀನಾ ಬಿಟ್ಟರೆ ಗರಿಷ್ಠ ಕರೊನಾ ವೈರಸ್ ಪ್ರಕರಣಗಳು ದಾಖಲಾಗಿರುವ ದಕ್ಷಿಣ ಕೊರಿಯಾ ಮುಂಬರುವ ಒಲಿಂಪಿಕ್ಸ್​ನಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಅನುಮಾನದಲ್ಲಿದೆ. 2016ರ ರಿಯೋ ಒಲಿಂಪಿಕ್ಸ್​ನಲ್ಲಿ 9 ಚಿನ್ನದೊಂದಿಗೆ 8ನೇ ಸ್ಥಾನ ಪಡೆದಿದ್ದ ದಕ್ಷಿಣ ಕೊರಿಯಾ ಒಲಿಂಪಿಕ್ಸ್ ಕೂಟವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ. ಆದರೆ, ದೇಶದ ಸ್ಪರ್ಧಿಗಳ ಮೇಲೆ ಇತರ ದೇಶಗಳು ಟ್ರಾವೆಲಿಂಗ್ ನಿಷೇಧ ಹೇರಿರುವ ಕಾರಣ ಅರ್ಹತಾ ಹಂತದ ಟೂರ್ನಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಆರ್ಚರಿ ಹಾಗೂ ಟೇಕ್ವಾಂಡೋ ಒಲಿಂಪಿಕ್ಸ್​ನಲ್ಲಿ ದಕ್ಷಿಣ ಕೊರಿಯಾದ ಯಶಸ್ವಿ ಕ್ರೀಡೆಗಳು. ಆದರೆ, ಇದರಲ್ಲಿ ಒಲಿಂಪಿಕ್ ಅರ್ಹತೆ ಪಡೆಯಲು ಸಾಧ್ಯವಾಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net