

ಮುಂಬೈ: ವಿಮಾನ ಪ್ರಯಾಣ ಮಾಡುತ್ತಿದ್ದ ನಟಿಯನ್ನು ಲೈಂಗಿಕವಾಗಿ ಶೋಷಿಸಿದ ಆರೋಪದ ಮೇಲೆ ಸಹಪ್ರಯಾಣಿಕನಾಗಿದ್ದ ಬಿಸಿನೆಸ್ಮನ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಾಪಾರಿಯನ್ನು ಉತ್ತರಪ್ರದೇಶದ ಘಾಜಿಯಾಬಾದ್ ನಿವಾಸಿ ನಿತಿನ್(36) ಎಂದು ಗುರುತಿಸಲಾಗಿದೆ.
ಮುಂಬೈ ನಿವಾಸಿಯಾದ 40 ವರ್ಷದ ಕಲಾವಿದೆಯು ಅಕ್ಟೋಬರ್ 1 ರಂದು ದೆಹಲಿಗೆ ಹೋಗಿದ್ದು, ಅ.3 ರಂದು ದೆಹಲಿಯಿಂದ ಮುಂಬೈಗೆ ಹಿಂತಿರುಗುತ್ತಿದ್ದಳು. ವಿಮಾನವು ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ನಿಂತಾಗ ಆಕೆ ಓವರ್ಹೆಡ್ ಸ್ಟೋರೇಜ್ನಿಂದ ತನ್ನ ಹ್ಯಾಂಡ್ಬ್ಯಾಗ್ ತೆಗೆದುಕೊಳ್ಳುತ್ತಿದ್ದಳು. ಆಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಆರೋಪಿಯು ನಟಿಯ ಸೊಂಟ ಹಿಡಿದು ತನ್ನೆಡೆಗೆ ಎಳೆದುಕೊಂಡ ಎನ್ನಲಾಗಿದೆ.
ಈ ಬಗ್ಗೆ ತಕ್ಷಣ ವಿಮಾನದ ಸಿಬ್ಬಂದಿಗೆ ತಿಳಿಸಿದಾಗ, ಅವರು ಆ ವ್ಯಕ್ತಿಯನ್ನು ಪಕ್ಕಕ್ಕೆ ಬಂದು ನಿಲ್ಲಲು ಹೇಳಿದ್ದರು. ನಂತರ ಈಮೇಲ್ ಮೂಲಕ ಏರ್ಲೈನ್ಸ್ಗೆ ದೂರು ನೀಡಿದ ನಟಿಯು, ವಿಮಾನ ನಿಲ್ದಾಣದಿಂದ ಹೊರಬಂದ ನಂತರ ಸಹಾರ್ ಪೊಲೀಸ್ ಠಾಣೆಯಲ್ಲೂ ಲಿಖಿತ ದೂರು ಸಲ್ಲಿಸಿದ್ದಳು.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಿಮಾನದ ಪ್ರಯಾಣಿಕರ ಮಾಹಿತಿ ಪಡೆದು, ನಟಿಯ ಸೀಟಿನ ಆಸುಪಾಸಿನಲ್ಲಿ ಕುಳಿತಿದ್ದವರ ಫೋಟೋಗಳನ್ನು ತರಿಸಿಕೊಂಡರು. ಸಂತ್ರಸ್ತ ನಟಿಯು ಆರೋಪಿಯನ್ನು ಗುರುತು ಹಿಡಿಯಲಾಗಿ ಆತನನ್ನು ಅ.14 ರಂದು ಪೊಲೀಸ್ ಠಾಣೆಗೆ ಕರೆಸಿ, ವಿಚಾರಣೆಯ ನಂತರ ಬಂಧಿಸಲಾಯಿತು ಎನ್ನಲಾಗಿದೆ. (ಏಜೆನ್ಸೀಸ್)