ಕೊಕ್ಕರ್ಣೆ: ಶಾಲೆ ಮತ್ತು ದೇವಸ್ಥಾನಗಳು ಊರಿನ ಎರಡು ಕಣ್ಣು. ಗ್ರಾಮೀಣ ಭಾಗದ ಶಾಲೆ ಅಭಿವೃದ್ಧಿಗೆ ದಾನಿ, ಹಳೇ ವಿದ್ಯಾರ್ಥಿಗಳು ಮತ್ತು ವಿದ್ಯಾಭಿಮಾನಿಗಳ ಸಹಕಾರ ಅಗತ್ಯ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ನಂಚಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ನಾಲ್ಕೂರು ಗ್ರಾಪಂ ಅಧ್ಯಕ್ಷೆ ಪ್ರತಿಮಾ ರವಿಚಂದ್ರ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಪ್ರತಾಪ್ ಹೆಗ್ಡೆ ಮಾರಾಳಿ, ವಿಶ್ವನಾಥ್ ಕರಬ, ಸತೀಶ್ ಶೆಟ್ಟಿ ನಂಚಾರು, ಉದಯ್ ಕೋಟಾ, ಸತೀಶ್ ಪೂಜಾರಿ, ಪ್ರಸಾದ್ ಹೆಗ್ಡೆ ನಂಚಾರು, ನಾಗರಾಜ ಆಚಾರ್ಯ, ರಾಮಮೂರ್ತಿ ಅಡಿಗ, ಚಂದ್ರಶೇಖರ ಅಡಿಗ, ದಿನಕರ ಶೆಟ್ಟಿ ಅಂಪಾರು, ಅರುಣ್ ಕುಮಾರ್ ಶೆಟ್ಟಿ, ಪ್ರತಿಭಾ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಗುರು ಮಹೇಶ್ ಮಂದಾರ್ತಿ, ಭಾಗವತ ಮಧುಕರ ಹೆಗ್ಡೆ ಹಾಗೂ ಗೌರವ ಶಿಕ್ಷಕಿ ಶರೀಕ ಅವರನ್ನು ಗೌರವಿಸಲಾಯಿತು. ನಂಚಾರು, ಅಂಬಾರಮಕ್ಕಿ, ಹೆಬ್ಬಾರ್‌ಬೆಟ್ಟು ಪುಟಾಣಿಗಳು, ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ, ವಿದ್ಯಾರ್ಥಿಗಳಿಂದ ಧ್ರುವ ಚರಿತ್ರೆ ಯಕ್ಷಗಾನ ಪ್ರದರ್ಶನ ಜರುಗಿತು. ಎಸ್‌ಡಿಎಂಸಿ, ಹಳೇ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ದಾನಿಗಳು, ಪಾಲಕರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ದೀಪಾ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಕ್ಷಕ ಶಶಿಧರ್ ಶೆಟ್ಟಿ ನಂಚಾರು ನಿರೂಪಿಸಿ, ಸಹಶಿಕ್ಷಕ ಅನಿಲ್ ವಂದಿಸಿದರು.