

ವಿಜಯವಾಣಿ ಸುದ್ದಿಜಾಲ ಕಾರ್ಕಳ
ತಾಲೂಕಿನ ಗಡಿ ಭಾಗವಾದ ಈದು ಸಮೀಪದ ಬೊಳ್ಳೆಟ್ಟುವಿನಲ್ಲಿ ನಕ್ಸಲ್ ಚಟುವಟಿಕೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ನಕ್ಸಲ್ ನಿಗ್ರಹ ದಳ ಕೂಬಿಂಗ್ ಕಾರ್ಯಾಚರಣೆ ಮತ್ತಷ್ಟು ಬಿಗುಗೊಳಿಸಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಪಶ್ಚಿಮಘಟ್ಟದ ತಪ್ಪಲಿನ ಕಾರ್ಕಳದ ತಾಲೂಕಿನ ಈದು ಗ್ರಾಮದಲ್ಲಿ ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡ ಹಾಡಹಗಲೇ ಕಾಣಿಸಿಕೊಂಡ ಬಗ್ಗೆ ಸುದ್ದಿಗಳು ಗ್ರಾಮದ ಜನರಲ್ಲಿ ಹರಿದಾಡುತ್ತಿದ್ದಂತೆ ಪೊಲೀಸ್ ಇಲಾಖೆ ಹಾಗೂ ಎಎನ್ಎಫ್ ತನಿಖೆ ಚುರುಕುಗೊಳಿಸಿದ್ದು, ಸ್ಥಳೀಯ ನಿವಾಸಿಗಳು ಹಾಗೂ ಕಾಡಂಚಿನ ಬಳಿ ವಾಸವಿರುವವರ ಬಳಿ ಮಾಹಿತಿ ಪಡೆಯುವ ಪ್ರಯತ್ನ ನಡೆಸಿದೆ.
ನಕ್ಸಲ್ ನಿಗ್ರಹದಳವು ಶ್ವಾನದಳ ಹಾಗೂ ಡ್ರೋನ್ ನೆರವಿನಿಂದ ಕಾರ್ಕಳ ಹಾಗೂ ಬೆಳ್ತಂಗಡಿ ತಾಲೂಕಿನ ಪೊಲೀಸರ ಜತೆ ಕಾರ್ಯಾಚರಣೆ ನಡೆಸುತ್ತಿದ್ದು, ಈವರೆಗೆ ನಿಖರ ಮಾಹಿತಿ ದೊರೆತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್, ಡಿಸೆಂಬರ್ ವೇಳೆ ರಾಮಪತ್ರೆ ಕಾಯಿ ಕೊಯ್ಯುವ ಸಮಯವಾಗಿದ್ದು, ಪಶ್ಚಿಮಘಟ್ಟಗಳ ಸಾಲಿನ ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿರುವುದರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತೆ ಸಿಬ್ಬಂದಿ, ಪೊಲೀಸರ ಗಮನ ಬೇರೆಡೆಗೆ ಸೆಳೆದು ಕಾಡುತ್ಪತಿ ಸಂಗ್ರಹಿಸುವ ಸಲುವಾಗಿ ನಕ್ಸಲ್ ಚಟುವಟಿಕೆಗಳ ಕುರಿತು ಅಪಪ್ರಚಾರ ನಡೆಸಿರುವ ಸಾಧ್ಯತೆ ಇದೆ ಎಂಬ ಸಂಶಯವೂ ಪೊಲೀಸರಿಂದ ವ್ಯಕ್ತವಾಗಿದೆ.
ಈದು ಗ್ರಾಮದಲ್ಲಿ ನಕ್ಸಲ್ ಹೆಜ್ಜೆ ಗುರುತು ಪತ್ತೆ ಕಾಡ್ಗಿಚ್ಚಿನಂತೆ ಹರಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಪೊಲೀಸರು ಹಾಗೂ ಎಎನ್ಎಫ್ ಅಧಿಕಾರಿಗಳು ಸತತ ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರು ಅನಾವಶ್ಯಕ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.