ಪ್ರಸಾದ್​ ನೇತ್ರಾಲಯದೊಂದಿಗೆ ಗೋವಾ ನ್ಯಾಚುರೋಪತಿ ಕಾಲೇಜು ಶೈಕ್ಷಣಿಕ ಒಪ್ಪಂದ

udp-13-netrajyothi
Published on

ಉಡುಪಿ: ನೇತ್ರಜ್ಯೋತಿ ಪ್ಯಾರಾಮೆಡಿಕಲ್​ ಕಾಲೇಜು ಮತ್ತು ಗೋವಾ ಸರ್ಕಾರದ ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನೊಂದಿಗೆ ಈಗಾಗಲೇ ಶೈಕ್ಷಣಿಕ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚನ ಉದ್ಯೋಗಾವಕಾಶಗಳು ಲಭ್ಯವಾಗಲಿದೆ ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ್​ ಸಾವಂತ್​ ಹೇಳಿದರು.

ನೇತ್ರ ಜ್ಯೋತಿ ಚಾರಿಟೇಬಲ್​ ಟ್ರಸ್ಟ್​ ಹಾಗೂ ಪ್ರಸಾದ್​ ನೇತ್ರಾಲಯ ಸೂಪರ್​ ಸ್ಪೆಷಾಲಿಟಿ ಸಹಸಂಸ್ಥೆ ನೇತ್ರಜ್ಯೋತಿ ಇನ್​ಸ್ಟಿಟ್ಯೂಟ್​ ಆಫ್​ ಅಲೈಡ್​ ಹೆಲ್ತ್​ ಸೈನ್ಸಸ್​ ಹಾಗೂ ನೇತ್ರಜ್ಯೋತಿ ಕಾಲೇಜ್​ ಆಫ್​ ಪಾರಾಮೆಡಿಕಲ್​ ಸೈನ್ಸಸ್​ ಘಟಿಕೋತ್ಸವ ಹಾಗೂ ನೂತನ ಸ್ನಾತಕೋತ್ತರ ಪದವಿ ಸೆಂಟರ್​ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಕ್ಷೇತ್ರದಲ್ಲಿ ಅರೆ ವೈದ್ಯಕಿಯ ಸಿಬ್ಬಂದಿಗೆ ಹೆಚ್ಚಿನ ಬೇಡಿಕೆ ಇದೆ. ಭಾರತದಲ್ಲಿ ಸುಮಾರು 50 ಲಕ್ಷ ಹಾಗೂ ಕರ್ನಾಟಕದಲ್ಲಿ 30 ಸಾವಿರ ನುರತ ಸಿಬ್ಬಂದಿ ಕೊರತೆ ಇದೆ. ಬೇಡಿಕೆ ಮತ್ತು ಪೂರೈಕೆ ಮಧ್ಯೆ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ಯಾರಾಮೆಡಿಕಲ್​ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಿವೆ ಎಂದರು.

2 ಲಕ್ಷ ವಿದ್ಯಾರ್ಥಿಗಳ ತಪಾಸಣೆ

ಗೋವಾ ರಾಜ್ಯದಲ್ಲಿ 2 ಸಾವಿರ ಶಿಕ್ಷಕರು ಹಾಗೂ 2 ಲಕ್ಷಕ್ಕೂ ಅಧಿಕ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆಯನ್ನು ಪ್ರಸಾದ್​ ನೇತ್ರಾಲಯ ವತಿಯಿಂದ ಕೈಗೊಳ್ಳಲಾಗಿತ್ತು. ಇದರಲ್ಲಿ 30 ಸಾವಿರ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಿಎಂ ವಿವಿಧ ಪದವಿಗಳನ್ನು ಪೂರೈಸಿದ 230 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ವಿದ್ಯಾರ್ಥಿಗಳಾದ ಕಾರ್ತಿಕ ಪೂಜಾರಿ ಮತ್ತು ಸಂಕೇತ್​ ವೀಣಾ ರುರಾಮ್​ ರಾವ್​ ದತ್ತಿ ಪುರಸ್ಕಾರ ಪಡೆದರು.

ಶಾಸಕ ಯಶ್ಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ್​ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ನೇತ್ರ ಜ್ಯೋತಿ ಚಾರಿಟೇಬಲ್​ ಟ್ರಸ್ಟ್​ ಟ್ರಸ್ಟಿಗಳಾದ ರಶ್ಮಿ ಕೃಷ್ಣಪ್ರಸಾದ್​, ಕೆ. ರುರಾಮ ರಾವ್​, ಸಂಸ್ಥೆ ಸಿಒಒ ಡಾ. ಗೌರಿ ಪ್ರಭು ಉಪಸ್ಥಿತರಿದ್ದರು. ಟ್ರಸ್ಟ್​ ಸ್ಥಾಪಕ ಅಧ್ಯಕ್ಷ ಡಾ. ಕೆ. ಕೃಷ್ಣಪ್ರಸಾದ್​ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಾಲಕೃಷ್ಣ ಮುದ್ದೋಡಿ ಕಾರ್ಯಕ್ರಮ ನಿರೂಪಿಸಿದರು. ಅಶೇಲ್​ ರಾ ವಂದಿಸಿದರು.

ಬಡವರ್ಗದ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ರೋಗಿಗಳ ಆರೈಕೆಯಲ್ಲಿ ವೈದ್ಯರಿಗಿಂತಲೂ ಅರೆ ವೈದ್ಯಕಿಯ ಸಿಬ್ಬಂದಿ ಪಾತ್ರ ಮಹತ್ವದ್ದಾಗಿದೆ. ಜೀವನದಲ್ಲಿ ಯಶಸ್ಸಿಗೆ ಅಡ್ಡದಾರಿಗಳಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಶ್ರಮವಹಿಸಿ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಪಡೆಯಬೇಕು. -ಡಾ. ಎಚ್​.ಎಸ್​. ಬಲ್ಲಾಳ್​, ಸಹಕುಲಾಧಿಪತಿ ಮಾಹೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net