ಪಾಕ್​ ಮಾಜಿ ಸರ್ವಾಧಿಕಾರಿ ಮುಷರಫ್​ಗೆ ಶ್ರದ್ಧಾಂಜಲಿ ಅರ್ಪಿಸಿದ ಕೇರಳ ಬ್ಯಾಂಕ್​ ಯೂನಿಯನ್​; ವ್ಯಾಪಕ ಖಂಡನೆ

Pervez Musharraf
Published on

ತಿರುವನಂತಪುರಂ: ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ, ಕಾರ್ಗಿಲ್​ ಯುದ್ಧದ ಮುಖ್ಯ ರೂವಾರಿ ಪರ್ವೇಜ್​ ಮುಷರಫ್​ ಮೃತಪಟ್ಟು 4 ವರ್ಷಗಳಾಗಿದ್ದು, ಇದೀಗ ಕೇರಳದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಜುಲೈ 26ರಂದು ನಡೆದ ಕಾರ್ಗಿಲ್​ ವಿಜಯೋತ್ಸವದ ಮಾರನೇ ದಿನ ಅಂದರೆ ಜುಲೈ 27ರಂದು  ಕಮ್ಯೂನಿಸ್ಟ್‌ ಪಕ್ಷದ ಬೆಂಬಲಿತ ಬ್ಯಾಂಕ್ ಆಫ್ ಇಂಡಿಯಾ ನೌಕರರ ಸಂಘ ಅಲಪ್ಪುಳದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ ನಟರು, ಗಾಯಕರು, ನೃತ್ಯಗಾರರು, ಕ್ರೀಡಾಪಟುಗಳು, ಕಾರ್ಯಕರ್ತರು ಮತ್ತು ಇತರರನ್ನು ಒಳಗೊಂಡಂತೆ ಸನ್ಮಾನಿಸಲ್ಪಡುವ ವ್ಯಕ್ತಿಗಳ ಹೆಸರನ್ನು ಸಂಘ ಬಿಡುಗಡೆ ಮಾಡಿತ್ತು. ಮಲಯಾಳಂನಲ್ಲಿ ಆಹ್ವಾನ ಪತ್ರಿಕೆಯ ಶ್ರದ್ಧಾಂಜಲಿ ಸಲ್ಲಿಸುವ ಗಣ್ಯರ ಪಟ್ಟಿಯಲ್ಲಿ ಪರ್ವೇಜ್‌ ಮುಷರಫ್‌ ಹೆಸರನ್ನು ನಮೂದಿಸಲಾಗಿತ್ತು.

ಪರ್ವೇಜ್​ ಮುಷರಫ್​ಗೆ ಶ್ರದ್ಧಾಂಜಲಿ ಸಲ್ಲಿಸಲು ಆಹ್ವಾನ ಪತ್ರಿಕೆ ಪ್ರಿಂಟ್​ ಮಾಡಿಸಿರುವ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಬ್ಯಾಂಕ್​ ಮುಂಭಾಗ ಪ್ರತಿಭಟನೆ ನಡೆಸಿದ್ದು, ಕೂಡಲೇ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನೆ ಜೋರಾಗುತ್ತಿದ್ದಂತೆ ಎಚ್ಚೆತ್ತ ಬ್ಯಾಂಕ್​ ಸಿಬ್ಬಂದಿ ಮುದ್ರಣ ದೋಷದಿಂದ ಹೀಗಾಗಿದ್ದು, ಕೂಡಲೇ ಹೆಸರನ್ನು ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮವನ್ನು ಕಾಂಗ್ರೆಸ್​ ಕಾರ್ಯದರ್ಶಿ, ರಾಹುಲ್​ ಗಾಂಧಿ ಆಪ್ತ ಕೆ.ಸಿ. ವೇಣುಗೋಪಾಲ್​ ಉದ್ಘಾಟಿಸಬೇಕಿತ್ತು. ಆದರೆ, ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇತ್ತ ಈ ಸುದ್ದಿ ಹೊರಬರುತ್ತಿದ್ದಂತೆ ಜನರು ಕಿಡಿಕಾರಿದ್ದು, ಕೂಡಲೇ ತಪ್ಪಿತಸ್ಥ ಬ್ಯಾಂಕ್​ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net