

ಬೆಂಗಳೂರು: ಬಾಕಿ ಉಳಿದ ಅಂದಾಜು 30 ಸಾವಿರ ಕೋಟಿ ರೂ.ಗಿಂತ ಅಧಿಕ ಕಾಮಗಾರಿಗಳ ಬಿಲ್ಗಳಿಗೆ ಹಣ ಪಾವತಿ ಕುರಿತು ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದು 4 ದಿನ ಕಳೆದ ಬಳಿಕ ರಾಜ್ಯ ಗುತ್ತಿಗೆದಾರರ ಸಂಘ, ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ಚಾಮರಾಜಪೇಟೆ 5ನೇ ಮುಖ್ಯ ರಸ್ತೆಯಲ್ಲಿರುವ ಗುತ್ತಿಗೆದಾರರ ಕೇಂದ್ರ ಕಚೇರಿಯಲ್ಲಿ ಶುಕ್ರವಾರ (ಜ.24) ಬೆಳಗ್ಗೆ 11 ಗಂಟೆಗೆ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಿಲ್ಗಳಿಗೆ ಹಣ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ತರುವುದು ಹಾಗೂ ಮುಂದಿನ ಹೋರಾಟದ ಕುರಿತು ಗುತ್ತಿಗೆದಾರರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಜಲಸಂಪನ್ಮೂಲ ಇಲಾಖೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ವಸತಿ ಸಚಿವ ಜಮೀರ್ ಅಹ್ಮದ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಮತ್ತು ಪೌರಾಡಳಿತ ಸಚಿವ ರಹೀಂಖಾನ್ ಅವರಿಗೆ ಜ.9ರಂದು ಸಂಘ ಪತ್ರ ಬರೆದಿತ್ತು. ಈ ಪತ್ರ ತಲುಪಿದ 7 ದಿನದೊಳಗೆ ಗುತ್ತಿಗೆದಾರರ ಕುಂದುಕೊರತೆಗಳ ಬಗ್ಗೆ ತಮ್ಮ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಕರೆಯಬೇಕೆಂದು 7 ಸಚಿವರಿಗೆ ಗಡುವು ಕೊಟ್ಟಿತ್ತು. ಜ.17ರಂದೇ ಗಡುವು ಮುಗಿದಿದೆ.
ಸ್ಪಂದಿಸದ 5 ಸಚಿವರು: ಪ್ರಿಯಾಂಕ್ ಖರ್ಗೆ ಮತ್ತು ಎನ್.ಎಸ್.ಬೋಸರಾಜು ಮಾತ್ರ ಗುತ್ತಿಗೆದಾರರ ಜತೆ ಸಭೆ ನಡೆಸಲು ಸಮ್ಮತಿಸಿದ್ದಾರೆ. ಗುರುವಾರ (ಜ.23) ಸಂಜೆ 4ಕ್ಕೆ ಬೋಸರಾಜು, ಗುತ್ತಿಗೆದಾರರ ಜತೆ ಸಭೆ ನಡೆಸಲು ಸಮಯ ನಿಗದಿಯಾಗಿದೆ. ಸಭೆ ನಡೆಸಲು ಪ್ರಿಯಾಂಕ್ ಖರ್ಗೆ ಸಮಯ ನಿಗದಿಪಡಿಸಿಲ್ಲ. ಮುಂದಿನ ಮುರ್ನಾಲ್ಕು ದಿನದೊಳಗೆ ಡಿಸಿಎಂ ಡಿಕೆಶಿ, ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಎಚ್. ಸಿ. ಮಹದೇವಪ್ಪ ಮತ್ತು ರಹೀಂಖಾನ್ ನಮ್ಮ ಪತ್ರಕ್ಕೆ ಸ್ಪಂದಿಸುವ ಅಚಲ ವಿಶ್ವಾಸ ಇದೆ. ಅದಕ್ಕಾಗಿ ಇನ್ನಷ್ಟು ಕಾಲಾವಕಾಶ ನೀಡಲಾಗುವುದು ಎಂದು ಸಂಘದ ಮೂಲಗಳು ತಿಳಿಸಿವೆ.