

ಕೊಪ್ಪಳ: ಕಾಮಗಾರಿಗೆ ವ್ಯಯಿಸಿದ ಹಣ ವಾಪಸ್ ನೀಡಲು ಮುಖ್ಯ ಗುತ್ತಿಗೆದಾರ ಹಾಗೂ ಸಹ ಗುತ್ತಿಗೆದಾರರು ಸತಾಯಿಸಿದ್ದರಿಂದ ಬೇಸತ್ತು ವಿಷ ಸೇವಿಸಿ ಗುತ್ತಿಗೆದಾರ ಮೃತಪಟ್ಟಿದ್ದು, ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದ ಬಿ.ಟಿ.ಪಾಟೀಲ್ ನಗರ ನಿವಾಸಿ ರಾಜೀವ್ ಬಗಾಡೆ (50) ಮೃತ. ಘಟನೆ ಸಂಬಂಧ ಗುತ್ತಿಗೆದಾರರಾದ ದೊಡ್ಡಪ್ಪ ಹರಿಗುರ, ರಫಿ ಆರ್.ಎಂ, ಪ್ರಸನ್ನ ಗಡಾದ, ಮಲ್ಲಿಕಾರ್ಜುನ, ಮುನಿ ವಿಜಯ ಕುಮಾರ, ಉಪೇಂದ್ರ ರಾಜು ಮತ್ತು ನಗರಸಭೆ ಸದಸ್ಯ ಚನ್ನಪ್ಪ ಕೊಟ್ಯಾಳ ವಿರುದ್ಧ ಮೃತನ ತಂದೆ ಮೋಹನ್ ಬಗಾಡೆ ಪ್ರಕರಣ ದಾಖಲಿಸಿದ್ದಾರೆ.
ಸಿವಿಲ್ ಗುತ್ತಿಗೆದಾರನಾಗಿದ್ದ ರಾಜೀವ್ ಬಗಾಡೆ, ದೊಡ್ಡಪ್ಪ ಹರಿಗುರಗೆ ಸಿಕ್ಕಿದ್ದ ಕಾಮಗಾರಿಯನ್ನು ಪಡೆದು ತಾನು ನಿರ್ವಹಿಸುತ್ತಿದ್ದ. ಎಫ್ಡಿಆರ್ ಮೊತ್ತವನ್ನೂ ಈತನೇ ತುಂಬಿದ್ದ. ವಿವಿಧ ಹಂತದ ಬಿಲ್ ಆಗಿದ್ದು, ಅಂತಿಮ ಬಿಲ್ ಹಾಗೂ ಎಫ್ಡಿಆರ್ ಮೊತ್ತವನ್ನು ವಾಪಸ್ ರಾಜೀವ್ಗೆ ನೀಡಿಲ್ಲ.
ತನಗೆ ಬರಬೇಕಾದ ಹಣ ನೀಡುವಂತೆ ಕೇಳಿದರೆ, ಆರೋಪಿಗಳು ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಸಾಯುವುದಾಗಿ ಪ್ರಚೋದನೆ ನೀಡಿದ್ದಾರೆ.
ಇದರಿಂದ ಮನ ನೊಂದ ರಾಜೀವ್ ಅ.10ರಂದು ವಿಷ ಸೇವಿಸಿ ಅಸ್ವಸ್ಥನಾಗಿದ್ದಾನೆ.
ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅ.13ರಂದು ರಾತ್ರಿ ಮೃತಪಟ್ಟಿದ್ದಾನೆ. ಆಸ್ಪತ್ರೆಯಲ್ಲಿರುವಾಗ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಹಾಗೂ ಕಾರಣರಾದ ವ್ಯಕ್ತಿಗಳ ಹೆಸರು ಹೇಳಿದ್ದು, ಸ್ನೇಹಿತರು ವಿಡಿಯೋ ಮಾಡಿಕೊಂಡಿದ್ದಾರೆ.
ಡೆತ್ ನೋಟ್ ಪತ್ತೆ: ರಾಜೀವ್ ಸಹ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಆರೋಪಿಗಳಿಂದ ತನಗೆ ಆದ ಅನ್ಯಾಯದ ಬಗ್ಗೆ ಉಲ್ಲೇಖಿಸಿದ್ದಾನೆ.
ಮಲ್ಲಿಕಾರ್ಜುನ 1 ಲಕ್ಷ ರೂ., ಮುನಿ ವಿಜಯ ಕುಮಾರ 8 ಲಕ್ಷ ರೂ., ಉಪೇಂದ್ರ ರಾಜು 5 ಲಕ್ಷ ರೂ. ಹಾಗೂ ಚನ್ನಪ್ಪ ಕೊಟ್ಯಾಳ 2 ಲಕ್ಷ ರೂ. ನೀಡಬೇಕಿದ್ದು, ಅದನ್ನು ತನ್ನ ಕುಟುಂಬವರಿಗೆ ಕೊಡಿಸುವಂತೆ ತಿಳಿಸಿದ್ದಾನೆ.
ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಕೊಪ್ಪಳ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.13ರಂದು ರಾಜೀವ್ ಹುಟ್ಟಿದ ದಿನವಾಗಿದ್ದು, ಅಂದೇ ಮೃತಪಟ್ಟಿದ್ದು ಕುಟುಂಬದವರ ದುಃಖ ಇಮ್ಮಡಿಸಿತು.