

ಕೋಟ: ಸುಮಾರು ಎಪ್ಪತ್ತರ ದಶಕದಿಂದ ಯಕ್ಷಗಾನದ ಅನೇಕ ಪ್ರಯೋಗ, ಹೊಸ ಸರಕು, ಅಪಸವ್ಯಗಳು ಯಕ್ಷಗಾನ ಕ್ಷೇತ್ರವನ್ನು ಆಕ್ರಮಿಸಿದರೂ ಸಾಲಿಗ್ರಾಮ ಮಕ್ಕಳ ಮೇಳ ಮಾತ್ರ ಅಂದಿನಿಂದ ಇಂದಿನವರೆಗೆ ಅದೇ ರುಚಿಶುದ್ಧಿಯ ಪರಂಪರೆಯೊಂದಿಗೆ ರಂಜನೆಯ ನಿರಂತರತೆ ಕಾಪಿಟ್ಟುಕೊಂಡು ಬಂದಿದೆ ಎಂದು ಕುಂದಾಪುರ ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಆದರ್ಶ ಹೆಬ್ಬಾರ್ ಹೇಳಿದರು.
ತೆಕ್ಕಟ್ಟೆ ಯಶಸ್ವಿ ಕಲಾವೃಂದದ ನೆರವಿನೊಂದಿಗೆ ಯಕ್ಷಗಾನದ ಸೀಮೋಲ್ಲಂಘನಗೈದ ಐತಿಹಾಸಿಕ ದಾಖಲೆಯ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವದ ಐದನೇ ಕಾರ್ಯಕ್ರಮ ಸುವರ್ಣ ಸಮ್ಮಿಲನ-50 ಬುಧವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಮೇಳ ಟ್ರಸ್ಟ್ ಅಧ್ಯಕ್ಷ ಕೆ.ಬಲರಾಮ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಯಕ್ಷಗಾನ ಕಲಾರಂಗದ ಮುರಲೀ ಕಡೆಕಾರ್, ಉಡುಪಿ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಯಶಸ್ವಿ ಕಲಾವೃಂದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಸಾಲಿಗ್ರಾಮ ಮಕ್ಕಳ ಮೇಳ ಸ್ಥಾಪಕ ನಿರ್ದೇಶಕ ಎಚ್.ಶ್ರೀಧರ ಹಂದೆ, ಕಾರ್ಯಾಧ್ಯಕ್ಷ ಕೆ.ಮಹೇಶ ಉಡುಪ, ಉಪಾಧ್ಯಕ್ಷ ಜನಾರ್ದನ ಹಂದೆ, ಸದಸ್ಯ ಶ್ರೀಕಾಂತ ಉಡುಪ ಉಪಸ್ಥಿತರಿದ್ದರು. ಕಾರ್ಯದರ್ಶಿ ಎಚ್.ಸುಜಯೀಂದ್ರ ಹಂದೆ ಸ್ವಾಗತಿಸಿದರು. ವಿನಿತಾ ವಂದಿಸಿದರು. ಕಾವ್ಯಾ ಹಂದೆ ಮತ್ತು ಮಾಧುರಿ ಶ್ರೀರಾಮ್ ನಿರೂಪಿಸಿದರು.
ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ, ಯಕ್ಷ ಗುರು ಕೋಟದ ಕೆ.ನರಸಿಂಹ ತುಂಗ ಹಾಗೂ ಮೇಳಕ್ಕೆ ವಿಶೇಷ ಸಹಕಾರ ನೀಡಿದವರನ್ನು ಸುವರ್ಣ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಮಕ್ಕಳ ಮೇಳದ ಹಿರಿ ಕಿರಿಯ ಕಲಾವಿದರಿಂದ ವೀರ ವೃಷಸೇನ, ಬಬ್ರುವಾಹನ ಪ್ರಸಂಗ ಪ್ರದರ್ಶನಗೊಂಡಿತು.