ಋಷಿಮುನಿಗಳ ಪರಂಪರೆ ಮುಂದುವರಿಕೆ

Mng_Legacy
Published on

ಮಂಗಳೂರು: ಗಾಯತ್ರಿ ಮಂತ್ರದ ಅನುಷ್ಠಾನದಲ್ಲಿ ವಿಪ್ರ ಸಮಾಜ ಒಂದಾಗಬೇಕು. ಗಾಯತ್ರೀ ಮಂತ್ರ ಜಪಿಸದಿದ್ದರೆ ನಾವು ಬ್ರಾಹ್ಮಣರು ಎನಿಸಿಕೊಳ್ಳಲು ಯಾವುದೇ ಅರ್ಹತೆ ಉಳಿಯಲಾರದು. ಋಷಿಗಳಿಂದ, ಸಾಧಕ ಹಿರಿಯರು ಮಾಡಿಕೊಂಡು ಬಂದ ಅನುಷ್ಠಾನವನ್ನು ನಾವು ಅನುಸರಿಸುತ್ತಿದ್ದೇವೆ. ಈ ಪರಂಪರೆ ಮುಂದಿನ ಪೀಳಿಗೆಗೂ ಮುಂದುವರಿಯಬೇಕಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಘಟಕ ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ಎರಡು ದಿನಗಳ ಕಾಲ ನಡೆದ ಗಾಯತ್ರಿ ಸಂಗಮ ಸಾಂಕ ಕೋಟಿ ಗಾಯತ್ರಿ ಜಪಯಜ್ಞದ ಧರ್ಮಸಭೆಯಲ್ಲಿ ಭಾನುವಾರ ಆಶೀರ್ವಚನ ನೀಡಿದರು.

ಎಡನೀರು ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿ, ಬ್ರಾಹ್ಮಣ ಸಮುದಾಯ ನಿತ್ಯವೂ 108 ಗಾಯತ್ರಿ ಮಂತ್ರವನ್ನು ಅನುಷ್ಠಾನಿಸಿ ಬ್ರಾಹ್ಮಣತ್ವದ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂದರು.

ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಸಮಾಜದ ಏಳಿಗೆಗಾಗಿ ಇಂತಹ ವಿಪ್ರ ಸಂಗಮ ನಿರಂತರವಾಗಿ ಮುಂದುವರಿಯುವ ಮೂಲಕ ನಮ್ಮ ಗೌರವ, ಸ್ಥಾನಮಾನ ಉಳಿಸಿಕೊಳ್ಳಬೇಕಿದೆ ಎಂದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಮಾತನಾಡಿದರು.

ಕಟೀಲು ಕ್ಷೇತ್ರದ ಹಿರಿಯ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ದಾನಿ, ವಸಂತ ಪಾಠ ಶಿಬಿರದ ರೂವಾರಿ ಸುರೇಶ್ ರಾವ್ ಕಟೀಲು ಅವರನ್ನು ಗೌರವಿಸಲಾಯಿತು.

ಬ್ರಾಹ್ಮಣ ಅಭಿವೃದ್ಧಿ ಸಮಿತಿಯ ಮಾಜಿ ನಿರ್ದೇಶಕ ಡಾ.ಬಿ.ಎಸ್ ರಾಘವೇಂದ್ರ ಭಟ್,ಸೂರ್ಯನಾರಾಯಣ ಭಟ್ ಕಶೆಕೋಡಿ, ಕಟೀಲು ಕ್ಷೇತ್ರದ ಹರಿನಾರಾಯಣ ದಾಸ ಆಸ್ರಣ್ಣ, ಸಂಚಾಲಕ ಸುರೇಶ್ ರಾವ್ ಚಿತ್ರಾಪುರ, ಕೃಷ್ಣ ಭಟ್ ಕದ್ರಿ, ಎಂ.ಟಿ. ಭಟ್, ಸುಬ್ರಹ್ಮಣ್ಯ ಕೋರಿಯಾರ್, ಸಮಿತಿ ಪದಾಧಿಕಾರಿಗಳು, ಬ್ರಾಹ್ಮಣ ಸಮಾಜದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಗಾಯತ್ರಿ ಸಂಗಮ ಅಧ್ಯಕ್ಷ ಮಹೇಶ್ ಕಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಡಿ ಶಾಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಸಂಚಾಲಕ ಶ್ರೆಧರ ಹೊಳ್ಳ ವಂದಿಸಿದರು.

ಗಾಯತ್ರಿ ಜಪಯಜ್ಞ ಸಂಪನ್ನ

ಜಪಯಜ್ಞದ ಸಂಚಾಲಕ ಕಟೀಲು ಕ್ಷೇತ್ರದ ಹರಿನಾರಾಯಣದಾಸ ಆಸ್ರಣ್ಣ ಅವರ ಮುಂದಾಳತ್ವದಲ್ಲಿ ಕುಡುಪು ಕೃಷ್ಣರಾಜ ತಂತ್ರಿಗಳ ಪೌರೋಹಿತ್ಯದಲ್ಲಿ ಜಪಯಜ್ಞವು ಬೆಳಗ್ಗೆ 6.30 ಆರಂಭಗೊಂಡು 10.30ಕ್ಕೆ ಮಹಾಪೂಜೆ ನೆರವೇರಿತು. ಉಡುಪಿ ,ದ.ಕ ಜಿಲ್ಲೆಯಿಂದ ಸಾವಿರಾರು ಮಂದಿ ವಿವಿಧ ಉಪ ಪಂಗಡಗಳಿಗೆ ಸೇರಿದ ಬ್ರಾಹ್ಮಣ ಸಮುದಾಯವು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿಯ ಒಂದೇ ಸೂರಿನಡಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net