

ಬೆಂಗಳೂರು: ಭ್ರಷ್ಟಾಚಾರಮುಕ್ತ ಆಡಳಿತ ನೀಡುತ್ತೇವೆ ಎಂಬ ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಕಳೆದ ಒಂದೂವರೆ ವರ್ಷದಲ್ಲಿ ಅಂಕೆಮೀರಿದ ಅಕ್ರಮಗಳು ರಾಜ್ಯ ಸರ್ಕಾರಕ್ಕೆ ಕೈಗನ್ನಡಿ ಹಿಡಿದಿವೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು ವಿಜಯಪುರ ಜಿಲ್ಲೆಯಲ್ಲಿ 16.85 ಕೋಟಿ ರೂ.ಗಳ ಅವ್ಯವಹಾರ ನಡೆಸಿರುವುದನ್ನು ಲೋಕಾಯುಕ್ತ ಪತ್ತೆ ಹಚ್ಚಿದ್ದರತ್ತ ಗಮನಸೆಳೆದಿದ್ದಾರೆ. ವಿಜಯಪುರ ಜಿಲ್ಲೆಯೊಂದರಲ್ಲೇ ಈ ಪರಿಯ ಅವ್ಯವಹಾರ ನಡೆದಿದೆ ಎಂದರೆ, ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲಿ ಯಾವಮಟ್ಟಕ್ಕೆ ಅಕ್ರಮಗಳು ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಶೋಷಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವ್ನನು ಅನ್ಯ ಕಾರ್ಯಗಳಿಗೆ ಕಾಂಗ್ರೆಸ್ ಸರ್ಕಾರ ಬಳಸಿಕೊಂಡಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಲೂಟಿ, ಮುಡಾ ಬಹುಕೋಟಿ ರೂ.ಗಳ ನಿವೇಶನಗಳ ಹಗರಣಗಳು ತನಿಖೆ ಹಂತದಲ್ಲಿದ್ದು, ಈಗ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅವ್ಯವಹಾರ ಬಯಲಾಗಿದೆ.
ದಿನದಿಂದ ದಿನಕ್ಕೆ ನಾಡಿನ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಾ ಅವ್ಯವಹಾರ, ಭ್ರಷ್ಟಾಚಾರ, ಅಕ್ರಮಗಳ ಮೂಲಕ ದೇಶದ ಅತೀ ಕಡುಭ್ರಷ್ಟ ರಾಜ್ಯವೆಂಬ ಅಪಕೀರ್ತಿಯನ್ನು ಕಾಂಗ್ರೆಸ್ ಸರ್ಕಾರ ತರುತ್ತಿದ್ದು, ನಿಮ್ನವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿ ನಿರೀಕ್ಷಿಸಿಲ್ಲ ಸಾಧ್ಯವಿಲ್ಲ ಎಂಬುದು ಪದೇ ಪದೆ ಬಯಲಾಗುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.