ಕಂಟೈನರ್ ಉರುಳಿ ಕಾರು ಅಪ್ಪಚ್ಚಿ : ವಾಂತಿ ಮಾಡಲು ಇಳಿದು ಪಾರಾದ ಪ್ರಯಾಣಿಕರು

lorry
ಅಪಘಾತ, ನಜ್ಜುಗುಜ್ಜಾದ ಕಾರು, ಕಂಟೈನರ್ ಅಡಿಯಲ್ಲಿ ಸಿಲುಕಿಕೊಂಡ ಕಾರು.
Published on

ಉಪ್ಪಿನಂಗಡಿ: ದಾವಣಗೆರೆ ಮೂಲದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಮೇಲೆ ಕಂಟೈನರ್ ಲಾರಿಯೊಂದು ಮಗುಚಿ ಬಿದ್ದು ಕಾರು ಅಪ್ಪಚ್ಚಿಯಾಗಿದ್ದರೂ ಪ್ರಯಾಣಿಕರು ಸಾವುನೋವು ಸಂಭವಿಸದೆ ಪಾರಾದ ಘಟನೆ ಶನಿವಾರ ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿ ರಾ.ಹೆ 75ರಲ್ಲಿ ನಡೆದಿದೆ.

ದಾವಣಗೆರೆಯ ನಿವಾಸಿಗರಾದ ಗಣೇಶ, ಶಿವು, ಕಾವ್ಯ, ದಂಡ್ಯಮ್ಮ ಎಂಬುವರು ಶುಕ್ರವಾರ ಧರ್ಮಸ್ಥಳ ಕ್ಷೇತ್ರಕ್ಕೆ ಬಂದವರು, ಶನಿವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶನ ಮಾಡಿ, ಅಲ್ಲಿಂದ ಊರಿಗೆ ಹಿಂತಿರುಗುವ ವೇಳೆಗೆ ಬರ್ಚಿನಹಳ್ಳದಲ್ಲಿ ಹೆದ್ದಾರಿ ಬದಿಯಲ್ಲಿ ಮಹಿಳೆಗೆ ವಾಂತಿ ಬಂದ ಕಾರಣದಿಂದ ಕಾರು ನಿಲ್ಲಿಸಿದ್ದರು. ಈ ವೇಳೆ ಮಂಗಳೂರು ಕಡೆಯಿಂದ ಬೆಂಗಳೂರಿನತ್ತ ಸಂಚರಿಸುತ್ತಿದ್ದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ನಿಲ್ಲಿಸಿದ್ದ ಕಾರಿನ ಮೇಲೆ ಮಗುಚಿ ಬಿತ್ತು. ಪರಿಣಾಮವಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಂಟೈನರ್ ಕೂಡ ಜಖಂಗೊಂಡಿದೆ. ಕಾವ್ಯ ಎಂಬ ಮಹಿಳೆಗೆ ವಾಂತಿ ಬಂದಾಗ ಕಾರನ್ನು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಎಲ್ಲರೂ ಇಳಿದಿದ್ದರು. ಈ ವೇಳೆ ಕಣ್ಣೆದುರೆ ಕಂಟೈನರ್ ಲಾರಿ ಮಗುಚಿ ಬಿದ್ದು ಕಾರು ಅಪ್ಪಚ್ಚಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net