ತಮಿಳುನಾಡಿನಲ್ಲಿ ವಿಷಯುಕ್ತ ಮದ್ಯ ಸೇವನೆ: ಕೊನೆಗೂ ಪ್ರಮುಖ ಆರೋಪಿ ಅರೆಸ್ಟ್!

tn
Published on

ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದ ವಿಷಕಾರಿ ಮದ್ಯ ಸೇವನೆ ದುರಂತದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕರುಣಾಪುರಂ ಗ್ರಾಮಕ್ಕೆ ಡಿಸ್ಟಿಲ್ಡ್ ಮದ್ಯವನ್ನು ಪೂರೈಸಿದ ಆರೋಪದ ಮೇಲೆ ಚಿನ್ನದೊರೈ ಎಂಬಾತನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಕರುಣಾಪುರಂನಲ್ಲಿ ಇದುವರೆಗೆ ವಿಷಕಾರಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 55ಕ್ಕೆ ಮುಟ್ಟಿದೆ. ಈ ವಾರದ ಆರಂಭದಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಿಂದ ಅನೇಕ ರೋಗಿಗಳು ಇನ್ನೂ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಆದರೆ ಪ್ರತಿದಿನ ಗ್ರಾಮದಲ್ಲಿ ಸಾವುಗಳು ವರದಿಯಾಗುತ್ತಲೇ ಇರುವುದು ಆತಂಕವನ್ನು ಹೆಚ್ಚಿಸಿದೆ.

ನಿನ್ನೆ ಸಂಜೆಯವರೆಗೂ 29 ಮಂದಿಯ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಎಂ.ಎಸ್ ಮಾಹಿತಿ ನೀಡಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಮೂವರು ಚೇತರಿಕೆ ಕಂಡಿದ್ದರೆ, ಡಜನ್​ಗೂ ಹೆಚ್ಚು ಜನರ ಆರೋಗ್ಯ ಅಪಾಯಪಟ್ಟದಲ್ಲೇ ಇದೆ.

ಪ್ರಕರಣವನ್ನು ತಮಿಳುನಾಡು ಸರ್ಕಾರವು ಸಿಐಡಿಗೆ ವಹಿಸಿದ್ದು, ಕಲ್ಲಕುರಚಿ ಜಿಲ್ಲಾಧಿಕಾರಿಯನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ಇದೆಲ್ಲದೆ ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿದ್ದು, ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಸಿಎಂ ಸ್ಟಾಲಿನ್​ ಘೋಷಿಸಿದ್ದಾರೆ.

ಕಲ್ಲಕುರಿಚಿಯಲ್ಲಿ ಕಲಬೆರಕೆಯ ಮದ್ಯ ಸೇವಿಸಿ ಜನರು ಸಾವನ್ನಪ್ಪಿದ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ಈ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ. ಈ ದುರಂತವನ್ನು ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಇಂತಹ ಅಪರಾಧಗಳಲ್ಲಿ ಭಾಗಿಯಾದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

ತನಿಖೆಗೆ ವಿಶೇಷ ಆಯೋಗ ರಚನೆ: ಇಡೀ ದುರಂತದ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ಬಿ ಗೋಕುಲದಾಸ್ (ನಿವೃತ್ತ) ಅವರನ್ನೊಳಗೊಂಡ ಏಕವ್ಯಕ್ತಿ ಆಯೋಗವನ್ನು ರಚಿಸಲಾಗಿದೆ. ಆಯೋಗವು ತನಿಖೆಯನ್ನು ಪ್ರಾರಂಭಿಸಿದ್ದು, ವರದಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ದುರಂತ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದೆ. ಘಟನೆಯ ನಂತರ ಕ್ರಿಮಿನಲ್ ಇತಿಹಾಸ ಹೊಂದಿರುವ ಮೂವರು ಆರೋಪಿಗಳನ್ನು ಸಹ ಬಂಧಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net