ಪೂರ್ಲಿಪಾಡಿಯಲ್ಲಿ ಟವರ್ ನಿರ್ಮಾಣ : ರೈತ ಸಂಘದಿಂದ ಪ್ರತಿಭಟನೆ : ಪಲಾಯನ ಮಾಡಿದ ಕಾರ್ಮಿಕರು

New Project (31)
Published on

ಬಂಟ್ವಾಳ: 400 ಕೆ.ವಿ. ವಿದ್ಯುತ್ ಪ್ರಸರಣ ತಂತಿಗಳನ್ನು ಅಳವಡಿಸಲು ಟವರ್ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಲ್ಲಡ್ಕದ ಪೂರ್ಲಿಪಾಡಿಯ ಬಾಯಿಲ ಎಂಬಲ್ಲಿನ ಖಾಸಗಿ ಜಮೀನಿನಲ್ಲಿ ಮರಗಳನ್ನು ಕಡಿಯುತ್ತಿದ್ದ ವೇಳೆ ರೈತ ಸಂಘ ಹಸಿರು ಸೇನೆ ಮುಖಂಡರು ಮುತ್ತಿಗೆ ಹಾಕಿ ಕೆಲಸವನ್ನು ತಡೆದ ಘಟನೆ ಮಂಗಳವಾರ ನಡೆದಿದೆ. ರಾಜಾರೋಷವಾಗಿ ಯಂತ್ರದ ಮೂಲಕ ಮರಗಳನ್ನು ಉರುಳಿಸುತ್ತಿದ್ದ ವೇಳೆ ರೈತ ಸಂಘದ ಮಾಹಿತಿಯಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆಯೇ ಮರ ಕಡಿಯುತ್ತಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ. ಇದೀಗ ಬಾಯಿಲದಲ್ಲೂ ಸ್ಥಳೀಯ ರೈತರಿಗೆ ಯಾವುದೇ ಮಾಹಿತಿ ನೀಡದೆ ಟವರ್ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡಿದೆ ಎಂದು ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ. ರೈತರ ವಿರೋಧದ ಹಿನ್ನಲೆಯಲ್ಲಿ ಕಂಪನಿ ಅಧಿಕಾರಿಗಳು ತೆರಳಿದ್ದು ನಾಳೆ ಬರುವುದಾಗಿ ತಿಳಿಸಿ ಹೋಗಿದ್ದಾರೆ. ಖಾಸಗಿ ಜಮೀನುಗಳನ್ನು ಕನ್ವರ್ಷನ್ ಮಾಡಿ ಬಳಿಕ ಕಾಮಗಾರಿ ನಡೆಸಬೇಕು ಎನ್ನುವ ನಿಯಮವಿದೆ. ಆದರೆ ಕಂಪನಿ ಅಧಿಕಾರಿಗಳು ಯಾವುದೋ ರಿಕ್ವೆಸ್ಟ್ ಲೆಟರ್ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ಅನುಮತಿ ಪಡೆದು ಕೆಲಸ ಮಾಡಬೇಕು ಎನ್ನುವುದು ರೈತ ಸಂಘದ ಆಗ್ರಹ. ರೈತ ಸಂಘದ ಮುಖಂಡರಾದ ಆನಂದ ಸಾಲ್ಯಾನ್ ಶಂಭೂರು, ಚಿತ್ರರಂಜನ್ ನೆಕ್ಕಿಲಾರು, ಅಣ್ಣುಗೌಡ, ಅಲೆಕ್ಸ್ ಸಿಕ್ವೇರಾ, ಅರುಣ್ ಡಿಸೋಜಾ ಅಗ್ರಹಾರ್, ಬೆನಡಿಕ್ಟ್ ಕಾರ್ಲೊ, ವಿನ್ಸೆಂಟ್ ಡೇಸಾ, ಸಂಜೀವ ಗೌಡ ಹಾಗೂ ಪೊಲೀಸ್ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕಂಪನಿಯ ಅಧಿಕಾರಿಗಳು ಹಾಜರಿದ್ದರು.

ಸ್ಟ್ಯಾಂಡರ್ಡ್‌ ಆಪರೇಷನ್ ಪ್ರೊಸೀಜರ್ ಎನ್ನುವ ಕೆಂದ್ರ ಸರ್ಕಾರದ ನಿರ್ದೇಶನದಂತೆ ಕಂಪನಿ ಸಂಬಂಧಪಟ್ಟವರಿಗೆ ನೋಟಿಸು ನೀಡಿ ಒಪ್ಪಿಗೆ ಪಡೆದು ಕೆಲಸ ನಡೆಸಬೇಕು. ಆದರೆ ಇಲ್ಲಿ ನೋಟಿಸ್ ನೀಡದೆ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯದೆ ಕಂಪನಿಯ ಸೂಚನೆಯಂತೆ ಕಾರ್ಮಿಕರು ಮರಗಳನ್ನು ಕಡಿದು ಹಾಕಿದ್ದಾರೆ. ಬಲವಂತವಾಗಿ ಕಾಡುಗಳನ್ನು ಕಡಿಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ರಾಜೀವ ಗೌಡ, ರೈತ ಸಂಘದ ಮುಖಂಡ ವೀರಕಂಬ ರಕ್ಷಿತಾರಣ್ಯದಲ್ಲಿ ಒಂದೂವರೆ ಕಿ.ಮೀ. ದೂರದವರೆಗೆ ತಂತಿ ಹಾದು ಹೋಗಲು 4 ಟವರ್ ನಿರ್ಮಾಣಗೊಳ್ಳಲಿದೆ. ಇದಕ್ಕೆ 3000 ಜಾತಿಯ ಮರಗಳು ನಾಶವಾಗಲಿದ್ದು, ಜಿಲ್ಲಾಡಳಿತ ಗಮನಹರಿಸಬೇಕಾಗಿದೆ. ಹಣದ ಆಮಿಷ ನೀಡಿ ಟವರ್ ನಿರ್ಮಾಣ ಮಾಡುತ್ತಿದ್ದಾರೆ. ಯೋಜನೆ ಪೂರ್ಣಗೊಳ್ಳುತ್ತಿದೆ ಎಂದು ನ್ಯಾಯಲಯಕ್ಕೆ ಸುಳ್ಳು ಮಾಹಿತಿ ನೀಡಲು ಸಿದ್ಧತೆ ಮಾಡುತ್ತಿದ್ದಾರೆ. ರೈತರಿಗೆ ಆಗುವ ಅನ್ಯಾಯ ನಿಲ್ಲಿಸಬೇಕು. ಟ್ರಿ ಕಮಿಟಿ ಮಾಡಿ ಸಮಿತಿ ನಿರ್ಣಯದ ಮೂಲಕ ಮರ ಕಡಿಯಲು ತೀರ್ಮಾನ ಕೈಗೊಳ್ಳಬೇಕು. ಶ್ಯಾಂ ವಿಟ್ಲ, ರೈತ ಸಂಘದ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net