

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಬಿ.ಸಿ.ರೋಡ್- ಅಡ್ಡಹೊಳೆ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಸಮೀಪ ಟೋಲ್ ಪ್ಲಾಜಾ ನಿರ್ಮಾಣವಾಗುತ್ತಿದೆ. ಕಾಮಗಾರಿ ಭರದಿಂದ ಸಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಯುತ್ತಿದ್ದಂತೆ ಟೋಲ್ಗೇಟ್ ಕಾರ್ಯಾರಂಭಗೊಳ್ಳಲಿದೆ.
ಬಿ.ಸಿ.ರೋಡ್ನಿಂದ ಅಡ್ಡಹೊಳೆ ತನಕ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶೇ.75ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಉಪ್ಪಿನಂಗಡಿಯಿಂದ 8 ಕಿ.ಮೀ. ದೂರದ ಬಜತ್ತೂರು ಗ್ರಾಮದ ವಳಾಲು- ನೀರಕಟ್ಟೆ ಮಧ್ಯೆ ಟೋಲ್ಗೇಟ್ ನಿರ್ಮಾಣಗೊಳ್ಳುತ್ತಿದೆ. ಇಲ್ಲಿ ವಿಶಾಲ ಜಾಗ ಇರುವುದು ಟೋಲ್ ಪ್ಲಾಜಾ ನಿರ್ಮಾಣಕ್ಕೆ ಪೂರಕವಾಗಿದೆ. ಇಲ್ಲಿ ಹೆದ್ದಾರಿಯ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದ್ದು, ಟೋಲ್ ಪ್ಲಾಜಾ ಅನುಷ್ಠಾನ ಕಾರ್ಯ ನಡೆಯುತ್ತಿದೆ. ಶೆಲ್ಟರ್ ಹಾಗೂ ಹೆದ್ದಾರಿ ಪಕ್ಕದಲ್ಲೇ ಕಾಂಪ್ಲೆಕ್ಸ್ ಕೂಡ ನಿರ್ಮಾಣಗೊಂಡಿದೆ. ಟೋಲ್ಗೇಟ್ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ತಲಾ 4 ಲೇನ್
ಬಿ.ಸಿ.ರೋಡು- ಪೆರಿಯಶಾಂತಿ ಮಧ್ಯೆ 46 ಕಿ.ಮೀ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ಕೆಎನ್ಆರ್ ಕನ್ಸ್ಟ್ರಕ್ಷನ್ ಕಂಪನಿಯೇ ಟೋಲ್ ಪ್ಲಾಜಾ ನಿರ್ಮಾಣ ಕಾರ್ಯನಿರ್ವಹಿಸುತ್ತಿದೆ. ಚತುಷ್ಪಥ ಹೆದ್ದಾರಿಯಲ್ಲಿ ಎರಡೂ ಕಡೆ ತಲಾ ನಾಲ್ಕು ಲೇನ್ಗಳು ಇರಲಿವೆ. ಒಂದೇ ಸಮಯಕ್ಕೆ ಎರಡು ಬದಿ ಒಟ್ಟು 8 ಲೇನ್ಗಳಲ್ಲಿ ವಾಹನ ಸಾಗಲು ಅವಕಾಶ ಸಿಗಲಿದೆ. ದ್ವಿಚಕ್ರ ಹಾಗೂ ಆಟೋಗಳ ಸಂಚಾರಕ್ಕೆ ಎರಡೂ ಬದಿ ಪ್ರತ್ಯೇಕ ಲೇನ್ಗಳಿರಲಿವೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಟೋಲ್ ಸಂಗ್ರಹವೂ ಆರಂಭಗೊಳ್ಳಲಿದ್ದು, ವಾಹನ ಸವಾರರು ಟೋಲ್ ಪಾವತಿಗೆ ಸಿದ್ಧವಾಗಬೇಕಿದೆ.
ಟೋಲ್ ಪ್ಲಾಜಾ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಬಹುತೇಕ ಕಾಮಗಾರಿಗಳು ಮುಗಿದಿವೆ. ಇನ್ನು ಒಂದೆರಡು ತಿಂಗಳಲ್ಲಿ ಉಳಿದ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಕೆಎನ್ಆರ್ ಕನ್ಸ್ಟ್ರಕ್ಷನ್ ಕಂಪನಿ ಟೋಲ್ ಪ್ಲಾಜಾ ನಿರ್ಮಾಣದ ಕಾಮಗಾರಿ ಮಾಡುತ್ತಿದೆ. ಕಾಮಗಾರಿ ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರವಾಗಲಿದೆ. ಆ ಬಳಿಕವೇ ಟೋಲ್ ಸಂಗ್ರಹದ ಬಗ್ಗೆ ಇಲಾಖೆ ನಿರ್ಧರಿಸಲಿದೆ. ಅನಿಲ್ ಕುಮಾರ್ ಸಿಂಗ್ ಮೇಲ್ವಿಚಾರಕರು, ಕೆಎನ್ಆರ್ ಸಂಸ್ಥೆ