ನವೆಂಬರ್‌ನಲ್ಲಿ ಚತುರ್ವೇದ ಜ್ಞಾನ ಮಹಾಯಜ್ಞ : ಒ.ಕೆ.ಜಯಚಂದ್ರನ್ ಮಾಹಿತಿ

Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ವಿಶ್ವ ಜ್ಞಾನ ಸಂಘ ಟ್ರಸ್ಟ್ ನೇತೃತ್ವದಲ್ಲಿ, ನವೆಂಬರ್ 17 ರಿಂದ 26ರವರೆಗೆ ಕಾಸರಗೋಡು ಚೌಕಿ ಕಾವುಗೋಳಿ ಶ್ರೀ ಶಿವ ದೇವಾಲಯ ವಠಾರದಲ್ಲಿ ಚತುರ್ವೇದ ಜ್ಞಾನ ಮಹಾಯಜ್ಞ ಜರಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಒ.ಕೆ.ಜಯಚಂದ್ರನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾಗ ಅಂಗವಾಗಿ ಜು.27ರಂದು ಬೆಳಗ್ಗೆ 10.30ಕ್ಕೆ ಕಾವುಗೋಳಿ ಶಿವ ದೇವಾಲಯ ವಠಾರದಲ್ಲಿ ನಕ್ಷತ್ರವನ ನಿರ್ಮಾಣಕ್ಕಾಗಿ ಸಸಿಗಳ ನೆಡುವಿಕೆ ನಡೆಯಲಿದೆ. ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸುವರು. ತೃಶ್ಯೂರ್ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಬ್ರಹ್ಮಸ್ವರೂಪಾನಂದಪುರಿ ಆಶೀರ್ವಚನ ನೀಡುವರು. ಟಿ.ಶ್ಯಾಮ್ ಭಟ್ ಉಪಸ್ಥಿತರಿರುವರು. ಸ್ವಾಗತ ಸಮಿತಿ ಕಚೇರಿಯನ್ನು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಉದ್ಘಾಟಿಸುವರು. ಆರೆಸ್ಸೆಸ್ ಕಾಸರಗೋಡು ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ನಕ್ಷತ್ರವನದ ಮಹತ್ವದ ಬಗ್ಗೆ ಮಾಹಿತಿ ನೀಡುವರು ಎಂದರು.

ನ.17ರಿಂದ ನಡೆಯಲಿರುವ ಚತುರ್ವೇದ ಜ್ಞಾನ ಮಹಾಯಜ್ಞವನ್ನು ತಮಿಳುನಾಡಿನ ಚಿದಂಬರಂ ದೇವಸ್ಥಾನದ ಪ್ರಧಾನ ಅರ್ಚಕ ಮಹಾದೇವ ದೀಕ್ಷಿತ್ ಮುಖ್ಯ ಪೌರೋಹಿತ್ಯದಲ್ಲಿ ನಾಲ್ಕು ಯಜ್ಞಶಾಲೆಗಳಲ್ಲಿ 16 ಸ್ಥಳಗಳಲ್ಲಿ ಹತ್ತು ದಿನಗಳ ಕಾಲ ನಡೆಸಲಾಗುವುದು. ಐದನೇ ಯಜ್ಞಶಾಲೆಯಲ್ಲಿ ವೇದ ಮಂತ್ರಗಳೊಂದಿಗೆ ಹೋಮಪೂಜಾದಿ ಕಾರ್ಯಗಳು ನೆರವೇರಲಿವೆ ಎಂದರು.

ರವೀಶ ತಂತ್ರಿ ಕುಂಟಾರು, ಟ್ರಸ್ಟ್ ಸದಸ್ಯ ಲಕ್ಷ್ಮೀ ನಾರಾಯಣ ಪಟ್ಟೇರಿ, ನಕ್ಷತ್ರ ವನ ನಿರ್ಮಾಣ ಸಮಿತಿ ಕಾರ್ಯದರ್ಶಿ ಕೆ. ಮುರಳೀಧರನ್ ಹರಿಜಾಲ್, ಪ್ರಚಾರಸಮಿತಿ ಸಂಚಾಲಕ ಗಣೇಶ ಮಾವಿನಕಟ್ಟೆ, ಉಮೇಶ್ ಕಡಪ್ಪುರ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಶಿಧರ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net