ಕೊರಗ ಕುಟುಂಬಗಳಿಗೆ ಗೃಹ ನಿರ್ಮಾಣ

koraga
Published on

ವಿಜಯವಾಣಿ ಸುದ್ದಿಜಾಲ ಕೋಟ

ಕೋಟತಟ್ಟು ಗ್ರಾಮ ಪಂಚಾಯಿತಿ ವತಿಯಿಂದ ದಾನಿಗಳ ಸಹಕಾರದೊಂದಿಗೆ ಇಲ್ಲಿನ ಕೊರಗ ಕಾಲನಿಯಲ್ಲಿ ವಾಸ್ತವ್ಯ ಹೊಂದಿರುವ ಎಂಟು ಕೊರಗ ಸಮುದಾಯದ ಕುಟುಂಬಗಳಿಗೆ ಮನೆ ನಿರ್ಮಿಸುತ್ತಿದ್ದು, ಶನಿವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದರು.

ಕೊರಗ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸವಲತ್ತು, ಜೀವನ ನಿರ್ವಹಣೆ ಕುರಿತು ಚರ್ಚಿಸಿದರು. ಕೋಟತಟ್ಟು ಗ್ರಾಮಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಅವರೊಂದಿಗೆ ಮನೆ ನಿರ್ಮಾಣದ ಮಾಹಿತಿ ಪಡೆದು ಪೂರ್ಣಗೊಳಿಸಲು ಬೇಕಾದ ತಯಾರಿ ಬಗ್ಗೆ ಚರ್ಚಿಸಿದರು. ಪಿಡಿಒ ರವೀಂದ್ರ ರಾವ್, ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಸದಸ್ಯರಾದ ಪ್ರಮೋದ ಹಂದೆ, ಪ್ರಕಾಶ ಹಂದಟ್ಟು, ವಾಸು ಪೂಜಾರಿ, ವಿದ್ಯಾ ಸಾಲಿಯಾನ, ರವೀಂದ್ರ ತಿಂಗಳಾಯ, ಸೀತಾ, ಮಾಜಿ ಸದಸ್ಯ ರಾಜೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಅರ್ಧದಷ್ಟು ಕಾಮಗಾರಿ ಪೂರ್ಣ

ಬಾರಿಕೆರೆಯ ಕೆ.ಕೆ.ಬೆಟ್ಟುವಿನಲ್ಲಿ ವಾಸ್ತವ್ಯವಿರುವ ಸುಮಾರು ಎಂಟಕ್ಕೂ ಅಧಿಕ ಕುಟುಂಬಗಳು ಗುಡಿಸಲು ಮನೆಯಲ್ಲಿ ವಾಸಿಸುತ್ತಿದ್ದು, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನೊಳಗೊಂಡ ತಂಡ ಎಲ್ಲ ಕುಟುಂಬಗಳಿಗೆ ಸುಸಜ್ಜಿತ ಮನೆ ನಿರ್ಮಿಸಲು ಪಣತೊಟ್ಟಿತ್ತು. ಮನೆ ನಿರ್ಮಾಣದ ಕಾಮಗಾರಿಗೆ ದಾನಿಗಳ ಮೊರೆಹೋಗಿದ್ದು ಆನಂದ್ ಸಿ.ಕುಂದರ್ ಸಹಿತ ಹಲವು ಉದ್ಯಮಿಗಳ, ಸಂಸ್ಥೆಗಳ ಸಹಕಾರ ಪಡೆದು ನವಕಾಯಕಲ್ಪಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ. ಈಗಾಗಲೇ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನಷ್ಟು ವೇಗ ಪಡೆಯಲಿದೆ.

ಮೇ ತಿಂಗಳಲ್ಲಿ ಪೂರ್ಣ!

ಸುಮಾರು 80 ಲಕ್ಷ ರೂ. ಅಂದಾಜು ವೆಚ್ಚದ ಎಂಟು ಮನೆಗಳ ಕಾಮಗಾರಿಯನ್ನು ಮೇ ತಿಂಗಳಿನಲ್ಲಿ ಪೂರ್ಣಗೊಳಿಸುವ ವಿಶ್ವಾಸದಲ್ಲಿ ಕೋಟತಟ್ಟು ಗ್ರಾಪಂ ಇದ್ದು, ಎಲ್ಲ ಮನೆಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಿ ಸಮುದಾಯಕ್ಕೆ ಹಸ್ತಾಂತರಿಸುವ ಸಿದ್ಧತೆಯಲ್ಲಿದೆ.

ಇಲ್ಲಿನ ಎಲ್ಲಾ ಕೊರಗ ಕುಟುಂಬಗಳಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲು ಪಂಚಾಯಿತಿ ಪೂರ್ಣಪ್ರಮಾಣದಲ್ಲಿ ಶ್ರಮಿಸುತ್ತಿದೆ. ಈಗಾಗಲೇ ಅರ್ಧದಷ್ಟು ಕಾಮಗಾರಿ ನಡೆದಿದ್ದು, ಬಾಕಿ ಉಳಿದ ಕಾಮಗಾರಿಗೆ ಆರ್ಥಿಕ ಕ್ರೋಡೀಕರಣಕ್ಕಾಗಿ ದಾನಿಗಳ ಸಹಕಾರ ಕೋರಿದ್ದೇವೆ. ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಮುದಾಯಕ್ಕೆ ಮನೆ ಹಸ್ತಾಂತರಿಸಲಿದ್ದೇವೆ. ಸತೀಶ್ ಕುಂದರ್, ಕೋಟತಟ್ಟು ಗ್ರಾಪಂ ಅಧ್ಯಕ್ಷ https://www.vijayavani.net/karkala-taluk-irregular-committee-meeting https://www.vijayavani.net/proper-use-of-government-facilities

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net