781 ‘ವಾತ್ಸಲ್ಯ’ಗೃಹ ನಿರ್ಮಾಣ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ

New Project (19)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದ ಮೂಲಕ ಇದುವರೆಗೆ 781 ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗಿದ್ದು, ಶಿಥಿಲಗೊಂಡ ಸೂರುಗಳನ್ನು ವ್ಯವಸ್ಥಿತವಾಗಿ ದುರಸ್ತಿಗೊಳಿಸಲಾಗುತ್ತಿದೆ.

ವಾತ್ಸಲ್ಯ ಕುಟುಂಬಗಳಿಗೆ ನೀರಿನ ವ್ಯವಸ್ಥೆ ಹಾಗೂ ಶೌಚಗೃಹ ಸಹಿತ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮೂಲಸೌಕರ್ಯ ಕೊರತೆ ಇರುವವರಿಗೆ, ವಸತಿ ರಹಿತ, ಶಿಥಿಲ ಮನೆ, ಗುಡಿಸಲು ಹೊಂದಿದವರಿಗೆ ಹೊಸ ವಾತ್ಸಲ್ಯ ಗೃಹಗಳನ್ನು ನಿರ್ಮಿಸಲಾಗುತ್ತಿದೆ.

ಸಮಾಜದಲ್ಲಿ ತಮ್ಮ ಕುಟುಂಬಸ್ಥರಿಂದಲೇ ನಿರ್ಲಕ್ಷೃಕ್ಕೊಳಗಾಗಿ ಅಸಹಾಯಕರಾಗಿರುವ ಸಾವಿರಾರು ಮಂದಿಗೆ ಯೋಜನೆ ಮೂಲಕ ಗುರುತಿಸಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಾಸಾಶನವನ್ನು ನೀಡುತ್ತಿದ್ದಾರೆ. ಅಸಹಾಯಕ ಫಲಾನುಭವಿಗಳಿಗೆ ಪ್ರಾಥಮಿಕ ಹಂತದಲ್ಲಿ ಬಟ್ಟೆ, ಹಾಸಿಗೆ, ಹೊದಿಕೆ, ದಿಂಬು, ಅಡುಗೆ ಪಾತ್ರೆಗಳು ಸಹಿತ ಅಗತ್ಯ ಸಾಮಾಗ್ರಿಗಳನ್ನು ವಾತ್ಸಲ್ಯ ಕಿಟ್‌ಗಳ ಮೂಲಕ ವಿತರಿಸಲಾಗುತ್ತಿದೆ.

ಪೌಷ್ಟಿಕ ಆಹಾರ: ಸಂಕಷ್ಟದಲ್ಲಿರುವ ಫಲಾನುಭವಿಗಳಿಗೆ ನಿತ್ಯದ ಆಹಾರಕ್ಕೂ ತೊಂದರೆ ಇರುವುದನ್ನು ಗಮನಿಸಿದ್ದು, ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಅಸಹಾಯಕ ಕುಟುಂಬಗಳಿಗೆ ವಾತ್ಸಲ್ಯ ಮಿಕ್ಸ್ ಪೌಷ್ಟಿಕ ಆಹಾರ ಪೂರೈಸಲು ಈಗಾಗಲೇ ಮಾರ್ಗದರ್ಶನ ನೀಡಲಾಗಿದೆ.

ಯೋಜನೆ ಹಿನ್ನೆಲೆ

ಮೂಲಸೌಕರ್ಯಗಳಿಲ್ಲದೆ ಶೋಚನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವವರ ಕುರಿತು ಅರಿತುಕೊಂಡ ಡಾ.ಹೇಮಾವತಿ ವೀ.ಹೆಗ್ಗಡೆಯವರು, ರಾಜ್ಯಾದ್ಯಂತ ತಮ್ಮ ಜ್ಞಾನವಿಕಾಸ ಕಾರ್ಯಕರ್ತರ ಮೂಲಕ ಒಂದು ಬೃಹತ್ ಸಮೀಕ್ಷೆ ನಡೆಸಿದರು. ಅವರಿಗೆ ಜೀವನ ಕಲ್ಪಿಸುವುದಕ್ಕಾಗಿ ವಿನೂತನವಾದ ವಾತ್ಸಲ್ಯ ಯೋಜನೆ ರೂಪಿಸಿದರು.

10 ಕೋಟಿ ರೂ.ಗೂ ಅಧಿಕ ವೆಚ್ಚ

ಜ್ಞಾನವಿಕಾಸ ಸಮನ್ವಯಾಧಿಕಾರಿಗಳ ಮೂಲಕ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಅಸಹಾಯಕ ಮಾಸಾಶನ ಫಲಾನುಭವಿಗಳ ಆಯ್ಕೆ ಮಾಡಿ ಅವರಿಗೆ ಮೂಲಸೌಕರ್ಯಗಳ ಕುರಿತು ವಿವರಣೆ ನೀಡಲಾಗಿದೆ. ಸರ್ವೇಕ್ಷಣೆ ವರದಿಯಲ್ಲಿ ಆಯ್ಕೆಯಾದ ಮಾಸಾಶನ ಫಲಾನುಭವಿಯ ಅಥವಾ ಫಲಾನುಭವಿಯ ಜತೆಗಿರುವ ನಿಕಟ ಸಂಬಂಧಿಕನ ಮಕ್ಕಳಿಗೆ ಶಿಕ್ಷಣಕ್ಕಾಗಿ ವಾತ್ಸಲ್ಯ ವಿದ್ಯಾನಿಧಿ ಒದಗಿಸಲಾಗುತ್ತಿದೆ. ಒಟ್ಟು 781 ವಾತ್ಸಲ್ಯ ಮನೆ ನಿರ್ಮಾಣ, ದುರಸ್ತಿಯಾಗಿ ಹಸ್ತಾಂತರಗೊಂಡಿದ್ದು, ಇದುವರೆಗೆ 10,85,14,000 ರೂ. ಮೊತ್ತ ವಾತ್ಸಲ್ಯ ಕಾರ್ಯಕ್ರಮಕ್ಕೆ ವಿನಿಯೋಗಿಸಲಾಗಿದೆ.

  • ಮೌಲಸೌಕರ್ಯ ಅಳವಡಿಕೆ, ಆರ್ಥಿಕ ನೆರವು
  • ಫಲಾನುಭವಿಗಳಿಗೆ ದಿನಸಿ ಪರಿಕರಗಳ ವಿತರಣೆ
  • ಅಶಕ್ತರಿಗೆ ಶ್ರೀ ಕ್ಷೇತ್ರದಿಂದ ಮಾಸಾಶನ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net