

ಶಿರಸಿ: ಕೇಂದ್ರ ಸರ್ಕಾರದ 4ಜಿ ಸ್ಯಾಚುರೇಶನ್ ಅಡಿ ನಿರ್ಮಿಸಲಾದ ಬಿಎಸ್‌ಎನ್‌ಎಲ್‌ನ 4ಜಿ ಮೊಬೈಲ್ ಗೋಪುರವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಾಲೂಕಿನ ಕಳವೆ ಹಂದಿಜಡ್ಡಿಯಲ್ಲಿ ಶುಕ್ರವಾರ ಉದ್ಘಾಟಿಸಿದರು. ಇದರೊಂದಿಗೆ ರಾಜ್ಯದಲ್ಲೇ ಬಿಎಸ್‌ಎನ್‌ಎಲ್ 4ಜಿ ಜಿಲ್ಲೆಯ ಮೂಲಕ ಆರಂಭಗೊಂಡಂತಾಗಿದೆ.
ಕುಗ್ರಾಮಗಳಲ್ಲಿ ಸಂಪರ್ಕ ವ್ಯವಸ್ಥೆ ಬಲಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ತಂದಿದೆ. ಸಂಪೂರ್ಣ ಸೋಲಾರ್ ವಿದ್ಯುತ್ ಮೂಲಕ ವೇಗದ ಇಂಟರ್‌ನೆಟ್ ಸೌಲಭ್ಯ ಸಿಕ್ಕಂತಾಗಿದೆ. ವಿಡಿಯೋ ಕರೆ ಮಾಡುವ ಮೂಲಕ ತಂತ್ರಜ್ಞಾನದ ಕಾರ್ಯಕ್ಷಮತೆ ವೀಕ್ಷಿಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಯುನೈಟೆಡ್ ಒಬ್ಲಿಗೇಶನ್ ಫಂಡ್ ಮೂಲಕ ಗ್ರಾಮೀಣ ಪ್ರದೇಶಕ್ಕೆ ಕೇಂದ್ರ ಹಣ ಒದಗಿಸಿದ್ದರಿಂದ ಉತ್ತರ ಕನ್ನಡ ಜಿಲ್ಲೆಗೆ 233 4ಜಿ ತಂತ್ರಜ್ಞಾನದ ಮೊಬೈಲ್ ಗೋಪುರ ಮಂಜೂರಾಗಿದೆ. ಮೈಕ್ರೋವೇವ್ ತರಂಗಾಂತರದ ಮೂಲಕ ಮತ್ತು ಫೈಬರ್ ಕೇಬಲ್ ಮೂಲಕ ಟಾವರ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ವರ್ಷಾಂತ್ಯದ ಒಳಗಡೆ ಕನಿಷ್ಠ 50 ಮೊಬೈಲ್ 4ಜಿ ಗೋಪುರ ಉದ್ಘಾಟನೆ ಗುರಿ ಹೊಂದಲಾಗಿದೆ. ಇದರ ಹೊರತಾಗಿ ಈಗಾಗಲೇ ಇರುವ 256 ಟಾವರ್‌ಗಳನ್ನೂ 4ಜಿಗೆ ಪರಿವರ್ತಿಸಲಾಗಿದೆ ಎಂದರು.
ಹೊಸ ಗೋಪುರ ನಿರ್ಮಾಣಕ್ಕೆ ಕೆಲವೆಡೆ ಅರಣ್ಯ ಇಲಾಖೆ ಅನುಮತಿ ನೀಡುವಿಕೆಯಲ್ಲಿ ಸಮಸ್ಯೆ ಉಂಟಾಗಿತ್ತು. ಮೊದಲ ಹಂತದಲ್ಲಿ 72 ಟಾವರ್‌ಗಳಿಗೆ ಉಂಟಾಗಿದ್ದ ಅರಣ್ಯ ಭೂಮಿ ಮಂಜೂರಿಯ ತೊಡಕನ್ನು ಈಗಾಗಲೇ ನಿವಾರಿಸಿದ್ದೇವೆ. ಇನ್ನೂ ಕೆಲವೆಡೆ ಮೊಬೈಲ್ ಟಾವರ್ ಸ್ಥಾಪನೆಗೆ ಅರಣ್ಯ ಇಲಾಖೆ ಅನುಮತಿ ಸಿಗಬೇಕಾಗಿದೆ. ಈ ಕುರಿತಂತೆ ಅರಣ್ಯ ಇಲಾಖೆಯೊಂದಿಗೆ ಮಾತನಾಡಿ ಶೀಘ್ರವೇ ಜಾಗ ಮಂಜೂರು ಮಾಡಲಾಗುವುದು ಎಂದರು.
ಬಿಎಸ್‌ಎನ್‌ಎಲ್ ಅಧಿಕಾರಿಗಳಾದ ನವೀನಕುಮಾರ ಗುಪ್ತ, ಬಿಂದು ಸಂತೋಷ, ನಾಗರಾಜ ನಾಯ್ಕ, ವಿಕ್ರಮ ಸಿಂಗ್, ಸಂತೋಷ ಚೌಹಾಣ, ಸುಹಾಸ ಹೆಗಡೆ, ಸ್ಥಳೀಯರಾದ ಶಿವಾನಂದ ಕಳವೆ ಇತರರಿದ್ದರು.
ಕುಮಟಾದ ಸಂತೆಗುಳಿ ಬಿಎಸ್‌ಎನ್‌ಎಲ್ ಟಾವರ್ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಡೇಟಾ ಬಳಕೆ ಮಾಡಿದ ಖ್ಯಾತಿ ಹೊಂದಿದೆ. ಜಿಲ್ಲೆಯಲ್ಲಿ ಈಗಾಗಲೇ ಬಳಕೆಯಲ್ಲಿರುವ ಆಫ್ಟಿಕಲ್ ಕೇಬಲ್‌ನ ಇಂಟರ್‌ನೆಟ್ ವೇಗ ಹೆಚ್ಚಿಸುವ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.I ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ