ಕಾಸರಗೋಡು: ಸಿಬಿಐ ಅಧಿಕಾರಿಯ ಸೋಗಿನಲ್ಲಿ ಮಂಜೇಶ್ವರದ ಉದ್ಯಮಿಯೊಬ್ಬರಿಗೆ ಕರೆಮಾಡಿದ ವ್ಯಕ್ತಿಯೊಬ್ಬ, ನಿಮ್ಮ ಪುತ್ರಿಯನ್ನು ಮಾದಕವಸ್ತು ಸಾಗಾಟ ಪ್ರಕರಣದಲ್ಲಿ ಸೆರೆಹಿಡಿಯಲಾಗಿದ್ದು, ಆಕೆಯನ್ನು ದೆಹಲಿಗೆ ಕರೆದೊಯ್ಯಲಿದ್ದೇವೆ. ಪ್ರಕರಣದಿಂದ ಹೊರತುಪಡಿಸಬೇಕಾದರೆ ತಕ್ಷಣ 15 ಲಕ್ಷ ರೂ. ನೀಡುವಂತೆ ಹಿಂದಿಯಲ್ಲಿ ಮಾತನಾಡಿ ಬೇಡಿಕೆಯಿರಿಸಿದ್ದಾನೆ.
ಗೂಗಲ್ ಪೇ ನಂಬರನ್ನೂ ರವಾನಿಸಿದ್ದಾನೆ. ಜತೆಗೆ ಪುತ್ರಿಯ ಅದೇ ಧ್ವನಿಯಲ್ಲಿ ಮಾತೃಭಾಷೆಯಲ್ಲಿ ತಂದೆಯೊಂದಿಗೆ ಕೂಗಿ ಮಾತನಾಡುತ್ತಿರುವ ಶಬ್ದವನ್ನೂ ಆಲಿಸಲಾಗಿತ್ತು. ಇದರಿಂದ ಆತಂಕಗೊಂಡ ಉದ್ಯಮಿ ತಕ್ಷಣ ಮಂಗಳೂರಿನಲ್ಲಿ ಪುತ್ರಿ ಕಲಿಯುತ್ತಿರುವ ಕಾಲೇಜಿಗೆ ಕರೆಮಾಡಿದಾಗ, ಅವರ ಪುತ್ರಿ ತರಗತಿಯಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಇದರಿಂದ ಉದ್ಯಮಿ ನಿರಾಳರಾಗಿದ್ದರು. ಈ ಬಗ್ಗೆ ವಿಚಾರಿಸಿದಾಗ ಕೆಲವು ಶಾಲಾ ವಿದ್ಯಾರ್ಥಿಗಳ ಪಾಲಕರಿಗೆ ಹಣಕ್ಕಾಗಿ ಈ ರೀತಿಯ ಕರೆ ಬಂದಿರುವುದಾಗಿ ಮಾಹಿತಿ ಲಭಿಸಿದೆ.